ನವದೆಹಲಿ: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ರಷ್ಯಾದಿಂದ ಅತ್ಯಾಧುನಿಕ ‘ಎಸ್-400 ಸುದರ್ಶನ್’ (S-400 Sudarshan) ವಾಯು ರಕ್ಷಣಾ ವ್ಯವಸ್ಥೆಯ ನಾಲ್ಕನೇ ಸ್ಕ್ವಾಡ್ರನ್ ಭಾರತಕ್ಕೆ ತಲುಪಿದೆ. ಈ ವ್ಯವಸ್ಥೆಯನ್ನು ಹಡಗಿನ ಮೂಲಕ ಭಾರತಕ್ಕೆ ತರಲಾಗಿದ್ದು, ಶೀಘ್ರದಲ್ಲೇ ಕಾರ್ಯನಿರ್ವಹಣಾ ವಲಯಗಳಲ್ಲಿ ನಿಯೋಜಿಸಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
2018ರಲ್ಲಿ ಭಾರತ ಮತ್ತು ರಷ್ಯಾ ನಡುವೆ ಐದು ಎಸ್-400 ಸ್ಕ್ವಾಡ್ರನ್ಗಳನ್ನು ಪಡೆಯುವ ಒಪ್ಪಂದವಾಗಿತ್ತು. ಇದರಲ್ಲಿ ಮೂರು ಸ್ಕ್ವಾಡ್ರನ್ಗಳು ಈಗಾಗಲೇ ಎರಡು ವರ್ಷಗಳ ಹಿಂದೆಯೇ ತಲುಪಿದ್ದವು. ಉಳಿದ ಎರಡು ಸ್ಕ್ವಾಡ್ರನ್ಗಳು ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ವಿಳಂಬವಾಗಿದ್ದವು.
ಐದನೇ ಸ್ಕ್ವಾಡ್ರನ್ ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ.ರಕ್ಷಣಾ ಸ್ವಾಧೀನ ಮಂಡಳಿ (DAC) ಈಗಾಗಲೇ ಇನ್ನೂ ಐದು ಎಸ್-400 ಸ್ಕ್ವಾಡ್ರನ್ಗಳ ಖರೀದಿಗೆ ಅನುಮೋದನೆ ನೀಡಿದೆ.
ಈ ‘ಸುದರ್ಶನ್’ ವ್ಯವಸ್ಥೆಯು ಕಳೆದ ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನ ವಾಯುಪಡೆಯ ವಿರುದ್ಧ ನಿರ್ಣಾಯಕ ಪಾತ್ರ ವಹಿಸಿತ್ತು. 300 ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿ ಹಾರುತ್ತಿದ್ದ ಪಾಕಿಸ್ತಾನದ ಅತ್ಯಮೂಲ್ಯ ಕಣ್ಗಾವಲು ವಿಮಾನವನ್ನು ಹೊಡೆದುರುಳಿಸುವ ಮೂಲಕ, ಇದುವರೆಗೆ ದಾಖಲಾದ ಅತಿ ಸುದೀರ್ಘ ಅಂತರದ ‘ಸರ್ಫೇಸ್-ಟು-ಏರ್’ (ಭೂಮಿಯಿಂದ ಆಕಾಶಕ್ಕೆ) ದಾಳಿಯನ್ನು ಇದು ಯಶಸ್ವಿಯಾಗಿ ನಿರ್ವಹಿಸಿತ್ತು.
ರಷ್ಯಾದ ಎಸ್-400 ವ್ಯವಸ್ಥೆಯಂತೆಯೇ, ಅಷ್ಟೇ ದೂರದ ವ್ಯಾಪ್ತಿಯಲ್ಲಿ ಶತ್ರುಗಳ ಡ್ರೋನ್ಗಳನ್ನು ಮತ್ತು ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ಸ್ವದೇಶಿ ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಭಾರತ ‘ಪ್ರಾಜೆಕ್ಟ್ ಕುಶಾ’ (Project Kusha) ಕೈಗೆತ್ತಿಕೊಂಡಿದೆ. ಈ ಯೋಜನೆಯಲ್ಲಿ ಭಾರತದ ಪ್ರಮುಖ ರಕ್ಷಣಾ ಉತ್ಪಾದನಾ ಸಂಸ್ಥೆಯಾದ ‘ಸೋಲಾರ್ ಇಂಡಸ್ಟ್ರೀಸ್’ (Solar Industries) ಅಭಿವೃದ್ಧಿ ಮತ್ತು ಉತ್ಪಾದನಾ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತಿದೆ.








