ನವದೆಹಲಿ: ಇರಾನ್-ಅಮೆರಿಕ ಸಂಘರ್ಷದಿಂದಾಗಿ ಏರಿಕೆ ಕಂಡಿರುವ ವಿಮಾನ ಇಂಧನ (ATF) ಬೆಲೆಗಳ ಪರಿಣಾಮವನ್ನು ತಗ್ಗಿಸಲು, ಭಾರತ ಸರ್ಕಾರವು ಬುಧವಾರ ವಿಮಾನಯಾನ ಸಂಸ್ಥೆಗಳಿಗೆ 1 ಬಿಲಿಯನ್ ಡಾಲರ್ ಮೌಲ್ಯದ ಪರಿಹಾರ ಪ್ಯಾಕೇಜ್ ಅನ್ನು ಅನುಮೋದಿಸಿದೆ.
ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಸಂಘರ್ಷವು ತೈಲ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗ ಹಾದುಹೋಗುವ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿನ ಅಡ್ಡಿಗಳಿಂದಾಗಿ ವಿಮಾನಯಾನ ಇಂಧನದ (ATF) ದರ ಗಗನಕ್ಕೇರಿದೆ.
ಸರ್ಕಾರವು ರಾಜ್ಯ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಬಡ್ಡಿ ರಹಿತ ಮುಂಗಡ ಹಣವನ್ನು ಒದಗಿಸಲಿದೆ. ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಇಂಧನ ದರವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ಸರ್ಕಾರಿ ದತ್ತಾಂಶದ ಪ್ರಕಾರ, ಮಾರ್ಚ್ ತಿಂಗಳಲ್ಲಿ ಪ್ರತಿ ಲೀಟರ್‌ಗೆ 60.50 ರೂಪಾಯಿ ಇದ್ದ ಇಂಧನ ದರವು ಮೇ ತಿಂಗಳಲ್ಲಿ 142 ರೂಪಾಯಿಗೆ ಏರಿಕೆಯಾಗಿದೆ. ಅಂದರೆ, ಬೆಲೆ ಎರಡು ಪಟ್ಟು ಹೆಚ್ಚಾಗಿದೆ.
ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣೆಯ ವೆಚ್ಚದಲ್ಲಿ ಇಂಧನದ ಪಾಲು ಸುಮಾರು 40% ರಷ್ಟಿದೆ. ಈ ಅನಿರೀಕ್ಷಿತ ದರ ಏರಿಕೆಯು ವಿಮಾನಯಾನ ಸಂಸ್ಥೆಗಳ ಲಾಭಾಂಶದ ಮೇಲೆ ಭಾರಿ ಒತ್ತಡ ಹೇರಿದೆ.
ಈ ಕುರಿತು ಮಾಹಿತಿ ನೀಡಿರುವ ತೈಲ ಸಚಿವ ಹರ್ದೀಪ್ ಪುರಿ, “ಈ ಕ್ರಮವು ವಿಮಾನಯಾನ ಕ್ಷೇತ್ರವನ್ನು ಅವಲಂಬಿಸಿರುವ ಸುಮಾರು 7.7 ದಶಲಕ್ಷ (77 ಲಕ್ಷ) ಉದ್ಯೋಗಗಳನ್ನು ರಕ್ಷಿಸಲಿದೆ. ಅಲ್ಲದೆ, ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯನ್ನು ಲಾಭದಾಯಕವಾಗಿಡುವ ಮೂಲಕ, ವಿಮಾನ ನಿಲ್ದಾಣದ ಮೂಲಸೌಕರ್ಯಗಳಲ್ಲಿ ಮಾಡಿರುವ ಸಾರ್ವಜನಿಕ ಹೂಡಿಕೆಯನ್ನು ಇದು ಸಂರಕ್ಷಿಸುತ್ತದೆ” ಎಂದು ಸಾಮಾಜಿಕ ಜಾಲತಾಣ ‘X’ ನಲ್ಲಿ ತಿಳಿಸಿದ್ದಾರೆ.








