- ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ದೀರ್ಘಾವಧಿಯ ರಾಜಕೀಯ ಚರ್ಚೆ ಹಾಗೂ ಹೈಕಮಾಂಡ್ ನಿರ್ದೇಶನದ ಬಳಿಕ, ರಾಜ್ಯ ಕಾಂಗ್ರೆಸ್ನ ಪ್ರಭಾವಿ ನಾಯಕ ಹಾಗೂ “ಟ್ರಬಲ್ ಶೂಟರ್” ಎಂದೇ ಹೆಸರಾದ ಡಿ.ಕೆ. ಶಿವಕುಮಾರ್ ಅವರು ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.
ಬೆಂಗಳೂರಿನ ಲೋಕ ಭವನದ ಆವರಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲರು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ತಾಯಿ ಗೌರಮ್ಮ ಹಾಗೂ ಹಿರಿಯರ ಆಶೀರ್ವಾದ ಪಡೆದು ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ದೇವರೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಜೊತೆಗೆ ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರು, ರೈತ ನಾಯಕರು, ಕನ್ನಡಪರ ಹೋರಾಟಗಾರರು ಹಾಗೂ ಸಾವಿರಾರು ಅಭಿಮಾನಿಗಳು ಈ ಸುದಿನಕ್ಕೆ ಸಾಕ್ಷಿಯಾದರು. ಸಂವಿಧಾನ ಹಿಡಿದುಕೊಂಡು ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರ ಮಾಡಿದ್ದು ವಿಶೇಶವಾಗಿತ್ತು. ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದಂತ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಇಂದಿನಿಂದ ಡಿ.ಕೆ ಶಿವಕುಮಾರ್ ದರ್ಬಾರ್ ಆರಂಭಗೊಂಡಂತೆ ಆಗಿದೆ.
ಡಾ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ; 13 ಸಚಿವರ ಪ್ರಮಾಣ ವಚನ
ಡಿ.ಕೆ. ಶಿವಕುಮಾರ್ ಅವರೊಂದಿಗೆ ಹಿರಿಯ ನಾಯಕರಾದ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರ ಜೊತೆಗೆ ಮೊದಲ ಹಂತದಲ್ಲಿ 13 ಪ್ರಮುಖ ನಾಯಕರು ಸಚಿವರಾಗಿ ಸಂಪುಟ ಸೇರಿದ್ದಾರೆ
- ಯತೀಂದ್ರ ಸಿದ್ದರಾಮಯ್ಯ
- ಯು.ಟಿ. ಖಾದರ್
- ಎಂ.ಬಿ. ಪಾಟೀಲ್
- ಕೆ.ಜೆ. ಜಾರ್ಜ್
- ಕೆ.ಎಚ್. ಮುನಿಯಪ್ಪ
- ಸತೀಶ್ ಜಾರಕಿಹೊಳಿ
- ರಾಮಲಿಂಗಾರೆಡ್ಡಿ
- ಕೃಷ್ಣ ಬೈರೇಗೌಡ
- ಪ್ರಿಯಾಂಕ್ ಖರ್ಗೆ
- ಈಶ್ವರ್ ಖಂಡ್ರೆ
- ಬೈರತಿ ಸುರೇಶ್
- ಶರಣಪ್ರಕಾಶ್ ಪಾಟೀಲ್
ರಾಜ್ಯಸಭಾ ಚುನಾವಣೆಗಳ ನಂತರ ಸಂಪುಟದ ಮುಂದಿನ ವಿಸ್ತರಣೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಂಘಟನಾ ಚಾತುರ್ಯ ಹಾಗೂ ಆಡಳಿತದ ಸುದೀರ್ಘ ಅನುಭವವಿದೆ. ಸಿದ್ದರಾಮಯ್ಯ ಅವರ ಯಶಸ್ವಿ ಆಡಳಿತದ ನಂತರ ಅಧಿಕಾರ ಹಿಡಿದಿರುವ ಡಿ.ಕೆ. ಶಿವಕುಮಾರ್ ಅವರ ಮುಂದೆ ಮುಂಬರುವ ಚುನಾವಣೆಗಳನ್ನು ಎದುರಿಸುವುದು, ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುವುದು ಹಾಗೂ ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ಇದೆ.ರಾಜ್ಯದ ಜನತೆ ನೂತನ ಮುಖ್ಯಮಂತ್ರಿಯವರ ಆಡಳಿತದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಕರ್ನಾಟಕದ ಪ್ರಗತಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.








