ಇರಾನ್ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಗೌರವಾರ್ಥ ಮೂರು ದಿನಗಳ ಸಾರ್ವಜನಿಕ ಅಂತ್ಯಕ್ರಿಯೆಯನ್ನು ನಡೆಸಲು ಇರಾನ್ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧದ ಮೊದಲ ದಿನವೇ ನಡೆದ ವೈಮಾನಿಕ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು ಎಂದು ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.
ಈ ಬಹು-ನಗರಗಳ ಸ್ಮರಣಾರ್ಥ ಕಾರ್ಯಕ್ರಮಗಳ ಆಡಳಿತಾತ್ಮಕ ವ್ಯವಸ್ಥೆಗಳನ್ನು ಟೆಹ್ರಾನ್ ಉಪಮೇಯರ್ ಮೊಹಮ್ಮದ್ ಅಮೀನ್ ತವಾಕೋಲಿ-ಜಾದೇ ವಿವರಿಸಿದ್ದಾರೆ. ರಾಜಧಾನಿ ಟೆಹ್ರಾನ್ ಜೊತೆಗೆ ಧಾರ್ಮಿಕ ಕೇಂದ್ರಗಳಾದ ಕ್ಯೂಮ್ (Qom) ಮತ್ತು ಮಶಾದ್ (Mashhad) ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಈ ಸ್ಮರಣಾರ್ಥ ಶೋಭಾಯಾತ್ರೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಇರಾನ್ನ ಸರಕಾರಿ ಪ್ರಸಾರ ಮಾಧ್ಯಮ ‘ಐಆರ್ಐಬಿ’ (IRIB) ಮೂಲಕ ಮಾತನಾಡಿದ ತವಾಕೋಲಿ-ಜಾದೇ, ಅಧಿಕೃತವಾಗಿ ಮಂಜೂರಾದ ಈ ಕಾರ್ಯಕ್ರಮದಲ್ಲಿ ಮೂರೂ ಸ್ಥಳಗಳಲ್ಲಿ ಬೃಹತ್ ಸಾರ್ವಜನಿಕ ಮೆರವಣಿಗೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ. ಟೆಹ್ರಾನ್ನಲ್ಲಿ ಮಾತ್ರವೇ ಮುಖ್ಯ ಸಮಾರಂಭಗಳು ಕನಿಷ್ಠ 24 ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಗಳಿಗೆ ಬೃಹತ್ ಸಂಖ್ಯೆಯಲ್ಲಿ, ಅಂದರೆ ಸುಮಾರು 2 ಕೋಟಿ (20 ಮಿಲಿಯನ್) ಜನರು ಭಾಗವಹಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಿರುವ ಪಾಲಿಕೆ ಅಧಿಕಾರಿಗಳು ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.
ಈ ದೀರ್ಘಕಾಲದ ನಾಯಕನ ನಿಧನವಾಗಿ ಹಲವು ತಿಂಗಳುಗಳ ನಂತರ ಈ ಅಧಿಕೃತ ಘೋಷಣೆ ಹೊರಬಿದ್ದಿದೆ. ಸಾಮಾನ್ಯವಾಗಿ ಇಸ್ಲಾಮಿಕ್ ಸಂಪ್ರದಾಯದಂತೆ ಮೃತಪಟ್ಟ ಕೆಲವೇ ದಿನಗಳಲ್ಲಿ ಅಂತ್ಯಕ್ರಿಯೆ ನಡೆಯಬೇಕಿದ್ದರೂ, ನಿರೀಕ್ಷಿತ ಜನಸಾಗರವನ್ನು ನಿರ್ವಹಿಸುವಲ್ಲಿನ ಆಡಳಿತಾತ್ಮಕ ಸವಾಲುಗಳ ಕಾರಣದಿಂದಾಗಿ ಇರಾನ್ ಅಧಿಕಾರಿಗಳು ಅಂತ್ಯಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು.
ಫೆಬ್ರವರಿ 28 ರಂದು ನಡೆದ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು. ಆಡಳಿತಾತ್ಮಕ ಅಧಿಕಾರಿಗಳು ಮಾರ್ಚ್ ಆರಂಭದಲ್ಲಿಯೇ ಅಂತ್ಯಕ್ರಿಯೆ ತಕ್ಷಣ ನಡೆಯುವುದಿಲ್ಲ ಎಂದು ತಿಳಿಸಿದ್ದರು. ಇರಾನ್ನ ಮತ್ತೊಂದು ಸರಕಾರಿ ಮಾಧ್ಯಮವಾದ ‘ಐಆರ್ಎನ್ಎ’ (IRNA) ವರದಿಯ ಪ್ರಕಾರ, ಜೂನ್ ಮಧ್ಯಭಾಗದಲ್ಲಿ ಈ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ. ಆದರೆ, ನಿಖರ ದಿನಾಂಕ ಮತ್ತು ಸಮಯವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.
ತಮ್ಮ 86ನೇ ವಯಸ್ಸಿನಲ್ಲಿ, ತಮ್ಮ ನಿವಾಸದ ಕಚೇರಿಯಲ್ಲಿದ್ದಾಗ ನಡೆದ ದಾಳಿಯಲ್ಲಿ ಖಮೇನಿ ಮೃತಪಟ್ಟರು. ಈ ಘಟನೆಯು ಇರಾನ್ನ ಅತ್ಯಂತ ಶಕ್ತಿಶಾಲಿ ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿಯಾಗಿದ್ದ ಅವರ ಮೂರು ದಶಕಗಳ ಆಳ್ವಿಕೆಯನ್ನು ಅಂತ್ಯಗೊಳಿಸಿತು.
ಘಟನೆಯ ಸಮಯದಲ್ಲಿ ಟೆಹ್ರಾನ್ನಿಂದ ಬಂದ ವರದಿಗಳ ಪ್ರಕಾರ, ಸ್ಥಳೀಯ ಜನರಲ್ಲಿ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅವರ ನಿಧನದ ಸುದ್ದಿಯ ನಂತರ ನಗರದ ವಿವಿಧ ಭಾಗಗಳಲ್ಲಿ ಅಚ್ಚರಿ, ಶೋಕ ಮತ್ತು ಸಂಭ್ರಮದ ದೃಶ್ಯಗಳು ಕಂಡುಬಂದಿದ್ದವು. ಖಮೇನಿ ಅವರ ನಿಧನದ ನಂತರ ಅವರ ಪುತ್ರ ಆಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ಅಧಿಕೃತ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಅವರು ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ.








