ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಒಳಗೆ ಮತ್ತು ಶಾಲಾ ಆವರಣದಲ್ಲಿ ಇನ್ಮುಂದೆ ಸಿನಿಮಾ, ಕಿರುಚಿತ್ರ ಹಾಗೂ ಧಾರಾವಾಹಿಗಳ ಚಿತ್ರೀಕರಣ ನಡೆಸುವುದಕ್ಕೆ ಶಾಲಾ ಶಿಕ್ಷಣ ಇಲಾಖೆಯು ಸಂಪೂರ್ಣ ನಿಷೇಧ ಹೇರಿದೆ. ಈ ಕುರಿತು ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಒಳಗೆ ಮತ್ತು ಶಾಲಾ ಆವರಣದಲ್ಲಿ ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ಹಾಗೂ ದೂರದರ್ಶನ ಧಾರಾವಾಹಿಗಳ ಚಿತ್ರೀಕರಣಕ್ಕಾಗಿ ನಿರ್ಮಾಪಕರು ಮತ್ತು ನಿರ್ದೇಶಕರಿಂದ ಅನುಮತಿ ಕೋರಿ ಇಲಾಖೆಗೆ ಹಲವಾರು ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿದ್ದವು. ಆದರೆ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ವಾತಾವರಣದ ಹಿತದೃಷ್ಟಿಯಿಂದ ಚಿತ್ರೀಕರಣಕ್ಕೆ ಅನುಮತಿ ನೀಡಲು ಇಲಾಖೆ ನಿರಾಕರಿಸಿದೆ.
ಚಿತ್ರೀಕರಣ ನಿಷೇಧಿಸಲು ಮುಖ್ಯ ಕಾರಣಗಳು:
ಶಾಲಾ ಶಿಕ್ಷಣ ಇಲಾಖೆಯು ಈ ಕಠಿಣ ನಿರ್ಧಾರ ಕೈಗೊಳ್ಳಲು ಪ್ರಮುಖ ಆರು ಕಾರಣಗಳನ್ನು ಪಟ್ಟಿ ಮಾಡಿದೆ:
ವಿದ್ಯಾರ್ಥಿಗಳ ಗೌಪ್ಯತೆ ಮತ್ತು ಸುರಕ್ಷತೆ: ಶಾಲೆಯಲ್ಲಿನ ವಿದ್ಯಾರ್ಥಿಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುವುದು ಆಯಾ ಶಾಲಾ ಮುಖ್ಯಸ್ಥರ ಹೊಣೆಯಾಗಿದ್ದು, ಚಿತ್ರೀಕರಣದಿಂದ ಇದಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುತ್ತದೆ.
ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅಡಚಣೆ: ಚಿತ್ರೀಕರಣವು ಶಾಲೆಯ ದೈನಂದಿನ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅಡಚಣೆಯುಂಟು ಮಾಡುವುದಲ್ಲದೆ, ವಿದ್ಯಾರ್ಥಿಗಳ ಕಲಿಕೆಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಬಹುದು.
ಶಾಲೆಯ ನಿಯಮಗಳು ಮತ್ತು ನೀತಿಗಳು: ಶಾಲೆಯ ಶಿಸ್ತು, ನೀತಿ ಮತ್ತು ನಿಯಮಾವಳಿಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಪೋಷಕರ ಒಪ್ಪಿಗೆ: ಕೆಲವು ಪೋಷಕರು ತಮ್ಮ ಮಕ್ಕಳ ಚಿತ್ರಗಳನ್ನು ಅಥವಾ ದೃಶ್ಯಗಳನ್ನು ಯಾವುದೇ ಮಾಧ್ಯಮಗಳಲ್ಲಿ ಪ್ರಕಟಿಸಲು ಒಪ್ಪಿಗೆ ನೀಡಿರುವುದಿಲ್ಲ.
ಸುರಕ್ಷತಾ ಕಾರಣಗಳು: ಶಾಲೆಯ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕಾಪಾಡಲು ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ: ಚಿತ್ರೀಕರಣದ ಗದ್ದಲ ಹಾಗೂ ಚಟುವಟಿಕೆಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಅವರಲ್ಲಿ ಒತ್ತಡವನ್ನು ಉಂಟುಮಾಡಬಹುದು.
ಶೈಕ್ಷಣಿಕ ವೇಳಾಪಟ್ಟಿಗೆ ಆದ್ಯತೆ:
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಿದಂತೆ ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಶಾಲಾ ಸಮಯ ಅಥವಾ ಆಸ್ಪದ ನೀಡಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಖಾಸಗಿ ಹಾಗೂ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಶಾಲಾ ಮೈದಾನ ಅಥವಾ ಆವರಣವನ್ನು ಬಳಸಲು ಈಗಾಗಲೇ ಅನುಮತಿ ನಿರಾಕರಿಸಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಇನ್ಮುಂದೆ ಶಾಲೆಯ ಒಳಗೆ ಯಾವುದೇ ರೀತಿಯ ಚಿತ್ರೀಕರಣ ನಡೆಸಲು ಅವಕಾಶವಿರುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.









