ಮಂಡ್ಯ: ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಮದ್ದೂರು ತಾಲೂಕಿನ ಕೊಪ್ಪದ ಶ್ರೀ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ಕೊಪ್ಪ 1 ನೇ ಹಾಗೂ 2 ನೇ ವೃತ್ತದ ಅಭಿಮಾನಿ ಬಳಗದವರ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಎನ್. ಚಲುವರಾಯಸ್ವಾಮಿ ರವರ 66 ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಚಲುವರಾಯಸ್ವಾಮಿ ಅವರು ರಾಜ್ಯದ ಕೃಷಿ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಜ್ಯದ ರೈತರಿಗೆ ಉತ್ತಮ ಯೋಜನೆಗಳನ್ನು ರೂಪಿಸುವುದು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದಾರೆ.
2023 ರಲ್ಲಿ ಕೃಷಿ ಸಚಿವರಾಗುತ್ತಿದ್ದಂತೆಯೇ ಜಿಲ್ಲೆಯ ಜೀವನಾಡಿಯಾಗಿರುವ ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನ, ಕೃಷಿ ವಿಶ್ವವಿದ್ಯಾಲಯ, ನಾಲೆಗಳ ಆಧುನಿಕರಣ ಸೇರಿದಂತೆ ಹತ್ತು ಹಲವು ರೈತ ಪರ ಕೆಲಸಗಳನ್ನು ಮಾಡುವ ಮೂಲಕ ರೈತ ಪರ ಕಾಳಜಿಯನ್ನು ತೋರಿರುವುದು ಜಿಲ್ಲೆಯ ಜನರಿಗೆ ತಿಳಿದ ವಿಷಯವೆಂದರು. ಅಷ್ಟೇ ಅಲ್ಲದೆ ರಾಜ್ಯದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ಕೃಷಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರೈತ ಪರವಾದದದ್ದು ಎಂಬುದನ್ನು ಸಾಬೀತು ಮಾಡುವ ಜತೆಗೆ ಈ ರಾಜ್ಯ ಕಂಡ ಅತ್ಯಂತ ಕ್ರಿಯಾಶೀಲ ಕೃಷಿ ಮಂತ್ರಿ ಎನಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಕಿರಿಯ ಸ್ವಾಮೀಜಿ ಶ್ರೀ ಸತ್ಕೀರ್ತನಾಥ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ರವರ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ಕೊಪ್ಪ ಹೋಬಳಿಯ ಅಕ್ಕ ಪಕ್ಕದ ಗ್ರಾಮಗಳ ಜನರಿಗೆ, ರೈತರಿಗೆ ಉಪಯೋಗವಾಗುವ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿರುವುದು ಪ್ರಶಂಶನೀಯವೆಂದರು.
ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಮಾತನಾಡಿ, ಸಚಿವ ಎನ್.ಚಲುವರಾಯಸ್ವಾಮಿ ಅವರು ಕೊಪ್ಪ ಹೋಬಳಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಆಸಕ್ತಿವಹಿಸಿ ಕೇವಲ ಮೂರು ವರ್ಷಗಳಲ್ಲಿ 300 ಕೋಟಿ ಗೂ ಹೆಚ್ಚಿನ ಅನುದಾನದಲ್ಲಿ ಈ ಭಾಗದ ಪ್ರತಿಯೊಂದು ಹಳ್ಳಿಯನ್ನು ಸಮಗ್ರ ಅಭಿವೃದ್ಧಿ ಮಾಡುತ್ತಿರುವುದು ಮೆಚ್ಚುಗೆಯ ವಿಷಯ ಎಂದರು.
ಚಲುವರಾಯಸ್ವಾಮಿ ರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು ಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು ಹಾಗೂ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪ ಹೋಬಳಿಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು. ಸಂಜೆ 6.30 ರ ನಂತರ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯಲ್ಲಿ ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೆ.ಸಿ.ಜೋಗೀಗೌಡ, ಮನ್ ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಎಂ.ರಘು, ಮಾಜಿ ಸದಸ್ಯ ತೋಯಜಾಕ್ಷ, ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ್ ಗೌಡ, ಗಟ್ಟಹಳ್ಳಿ ಹರೀಶ್, ವಿ.ಎಸ್.ಎಸ್.ಎನ್.ಬಿ. ಅಧ್ಯಕ್ಷ ಶಿವಲಿಂಗಯ್ಯ, ಗ್ರಾಪಂ ಮಾಜಿ ಸದಸ್ಯರಾದ ರಮೇಶ್ ಗೌಡ, ಪರ್ವಿಜ್ ಅಹಮ್ಮದ್, ಗಿರೀಶ್, ನವೀನ್ ಕುಮಾರ್, ಸಂತೋಷ್ ಕೊಟ್ಟಿಗೆಯಾರ್, ಸುರೇಶ್, ರುದ್ರೇಶ್, ಕಿರಂಗೂರು ಅಪ್ಪಾಜಪ್ಪ ಸೇರಿದಂತೆ ಹಲವರು ಹಾಜರಿದ್ದರು.








