ಜೈಪುರ: ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಭೀಕರ ಧೂಳಿನ ಬಿರುಗಾಳಿ (Dust Storm) ಅಪ್ಪಳಿಸಿದೆ. ಇಡೀ ನಗರವನ್ನು ದಟ್ಟವಾದ ಧೂಳಿನ ಮೋಡಗಳು ಆವರಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಹಗಲು ಹೊತ್ತೇ ಸಂಪೂರ್ಣ ಕತ್ತಲೆಯಾಗಿ ಮಾರ್ಪಟ್ಟಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಬೃಹತ್ ಮರಳಿನ ಗೋಡೆಯೊಂದು ಇಡೀ ನಗರವನ್ನು ನುಂಗಲು ಬರುತ್ತಿರುವಂತೆ ಕಾಣುತ್ತಿದ್ದು, ಈ ದೃಶ್ಯಗಳು ಜನರಲ್ಲಿ ತೀವ್ರ ಭೀತಿ ಹುಟ್ಟಿಸುವಂತಿವೆ. ಧೂಳಿನ ತೀವ್ರತೆಗೆ ಪ್ರಮುಖ ರಸ್ತೆಗಳಲ್ಲಿ ದೃಷ್ಟಿಗೋಚರತೆ (Visibility) ಸಂಪೂರ್ಣ ಕುಸಿದಿದ್ದು, ವಾಹನ ಸವಾರರು ತೀವ್ರ ಪರದಾಡಿದರು. ದಟ್ಟವಾದ ಹಳದಿ-ಕಂದು ಬಣ್ಣದ ಧೂಳು ನಗರವನ್ನು ಆವರಿಸಿದ್ದರಿಂದ ಅಪಘಾತದ ಭಯದಿಂದ ಜನರು ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿ, ಸುರಕ್ಷಿತ ಸ್ಥಳಗಳತ್ತ ಧಾವಿಸಿದರು.
ಮಾರುಕಟ್ಟೆಗಳು ಬಂದ್, ವಿದ್ಯುತ್ ಸಂಪರ್ಕ ಕಡಿತ
ಬಿರುಗಾಳಿಯ ಗಾಳಿ ತೀವ್ರಗೊಳ್ಳುತ್ತಿದ್ದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವ್ಯಾಪಾರಿಗಳು ಅವಸರದಲ್ಲಿ ಅಂಗಡಿಗಳ ಶಟರ್ಗಳನ್ನು ಎಳೆದರೆ, ಸಾರ್ವಜನಿಕರು ಧೂಳಿನಿಂದ ರಕ್ಷಣೆ ಪಡೆಯಲು ಇಕ್ಕಟ್ಟಾದ ಜಾಗಗಳಲ್ಲಿ ಆಶ್ರಯ ಪಡೆದರು. ಬಿರುಗಾಳಿಯ ರೌದ್ರಾವತಾರಕ್ಕೆ ನಗರದ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಹತ್ತಾರು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
Video: Massive Dust Storm Plunges Rajasthan's Bikaner Into Near-Darkness https://t.co/Rg7I8Ans9r pic.twitter.com/6Ng225RSax
— NDTV (@ndtv) May 30, 2026
ಹವಾಮಾನ ಇಲಾಖೆಯಿಂದ ಹೈ ಅಲರ್ಟ್
ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಭಾರಿ ಗುಡುಗು ಸಹಿತ ಮಳೆಯಾಗಿದೆ. ಧೋಲ್ಪುರ ಜಿಲ್ಲೆಯ ಬಾರಿಯಲ್ಲಿ ಗರಿಷ್ಠ 58 ಮಿಮೀ ಮಳೆ ದಾಖಲಾಗಿದೆ. ಜೈಪುರ ಹವಾಮಾನ ಕೇಂದ್ರದ ಮುನ್ಸೂಚನೆಯ ಪ್ರಕಾರ, ಶನಿವಾರದಂದು ಬಿಕಾನೇರ್, ಜೈಪುರ, ಅಜ್ಮೀರ್, ಭರತ್ಪುರ, ಕೋಟಾ, ಜೋಧ್ಪುರ ಮತ್ತು ಉದಯಪುರ ವಿಭಾಗಗಳ ಹಲವು ಭಾಗಗಳಲ್ಲಿ ಗಂಟೆಗೆ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಮುಂದಿನ 5 ದಿನ ಹವಾಮಾನ ಹೀಗಿರಲಿದೆ:
ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ, ಆಲಿಕಲ್ಲು ಮಳೆ ಮತ್ತು ಸಿಡಿಲು ಬಡಿಯುವ ಸಾಧ್ಯತೆಯೂ ಇದೆ. ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಯ ಈ ಪ್ರಕ್ರಿಯೆಯು ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 4 ರಿಂದ 5 ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಮತ್ತು ತೀವ್ರ ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.








