ಬೆಂಗಳೂರು: ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನೂತನ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ರಾಜಭವನಕ್ಕೆ ತೆರಳಿ ಸರ್ಕಾರ ರಚಿಸಲು ಅಧಿಕೃತವಾಗಿ ಹಕ್ಕು ಮಂಡಿಸಿದರು.
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಹಿರಿಯ ನಾಯಕರ ನಿಯೋಗವು, ತಮಗೆ ಶಾಸಕರ ಸಂಪೂರ್ಣ ಬೆಂಬಲವಿರುವ ಅಧಿಕೃತ ಪತ್ರವನ್ನು ಹಸ್ತಾಂತರಿಸಿತು. ಜೊತೆಗೆ ರಾಜ್ಯದಲ್ಲಿ ನೂತನ ಸಂಪುಟ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿ, ಜೂನ್ 3ರಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯಪಾಲರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
ಒಂದೇ ಕಾರಿನಲ್ಲಿ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ನಾಯಕರು
ವಿಧಾನಸೌಧದಲ್ಲಿ ಸಭೆ ಮುಗಿದ ತಕ್ಷಣವೇ ರಾಜಭವನದತ್ತ ಧಾವಿಸಿದ ನಾಯಕರ ನಡೆ ತೀವ್ರ ಕುತೂಹಲ ಮೂಡಿಸಿತ್ತು. ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್ ಅವರು ಒಂದೇ ಕಾರಿನಲ್ಲಿ ಒಟ್ಟಿಗೆ ರಾಜಭವನಕ್ಕೆ ಆಗಮಿಸುವ ಮೂಲಕ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಬಲವಾದ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದರು.
ಜೂನ್ 3ರಂದು ನೂತನ ಸರ್ಕಾರದ ಉದಯ
ರಾಜ್ಯಪಾಲರಿಗೆ ಆಹ್ವಾನ ಪತ್ರ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕರು, ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿಗಳ ಮಾರ್ಗದರ್ಶನದಂತೆ ಜೂನ್ 3ರ ಬುಧವಾರ ಸಂಜೆ ಬೆಂಗಳೂರಿನ ಲೋಕಭವನದಲ್ಲಿ ಅತ್ಯಂತ ಸರಳವಾಗಿ ಪ್ರಮಾಣ ವಚನ ಕಾರ್ಯಕ್ರಮ ಜರುಗಲಿದೆ ಎಂದು ಖಚಿತಪಡಿಸಿದರು. ರಾಜ್ಯಪಾಲರ ಭೇಟಿಯ ಬೆನ್ನಲ್ಲೇ ರಾಜಭವನ ಮತ್ತು ಲೋಕಭವನದಲ್ಲಿ ನೂತನ ಸರ್ಕಾರದ ಪದಗ್ರಹಣಕ್ಕೆ ಪೂರ್ವಭಾವಿ ಸಿದ್ಧತೆಗಳು ಅಧಿಕೃತವಾಗಿ ಆರಂಭಗೊಂಡಿವೆ.
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








