ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಸ್ಥಳ ಹಾಗೂ ದಿನಾಂಕದ ಕುರಿತಾಗಿದ್ದ ಎಲ್ಲ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಈ ಬಾರಿ ರಾಜಭವನ ಅಥವಾ ವಿಧಾನಸೌಧದ ಬದಲು, ಬೆಂಗಳೂರಿನ ಲೋಕಭವನದ ಆವರಣದಲ್ಲಿರುವ ‘ಗ್ಲಾಸ್ ಹೌಸ್’ (Glass House) ನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.
ಜೂನ್ 3, ಬುಧವಾರ ಮಧ್ಯಾಹ್ನ 3ಕ್ಕೆ ಮುಹೂರ್ತ
ವಿಡಿಯೋ ವರದಿಯ ಪ್ರಕಾರ, ಜೂನ್ 3ರ ಬುಧವಾರದಂದು ಮಧ್ಯಾಹ್ನ 3:00 ಗಂಟೆಗೆ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಜೊತೆಗೆ ಹತ್ತರಿಂದ ಹನ್ನೆರಡು ಜನ ಶಾಸಕರು ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಗ್ಲಾಸ್ ಹೌಸ್ ಆಯ್ಕೆ ಮಾಡಿದ್ದೇಕೆ?
ಮೊದಲು ವಿಧಾನಸೌಧದ ಮುಂಭಾಗದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಯೋಚಿಸಲಾಗಿತ್ತು. ಆದರೆ ಸದ್ಯ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇರುವುದರಿಂದ ಓಪನ್ ಗ್ರೌಂಡ್‌ನಲ್ಲಿ ಕಾರ್ಯಕ್ರಮ ಮಾಡಿದರೆ ತೊಂದರೆಯಾಗಬಹುದು ಎಂಬ ಆತಂಕವಿತ್ತು . ಡಿ.ಕೆ. ಶಿವಕುಮಾರ್ ಅವರ ಸಾವಿರಾರು ಅಭಿಮಾನಿಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಗಣ್ಯರು ಆಗಮಿಸುತ್ತಿರುವುದರಿಂದ, ಯಾರಿಗೂ ಪಜಿತಿಯಾಗಬಾರದು ಎಂಬ ಕಾರಣಕ್ಕೆ ಇನ್-ಡೋರ್ ಮಾದರಿಯ ಲೋಕಭವನದ ‘ಗ್ಲಾಸ್ ಹೌಸ್’ ಅತ್ಯಂತ ಸುರಕ್ಷಿತ ಸ್ಥಳ ಎಂದು ಫೈನಲ್ ಮಾಡಲಾಗಿದೆ.
ಅಜ್ಜಯ್ಯನ ಸಲಹೆಯಂತೆ ಪ್ರತಿಯೊಂದು ಹೆಜ್ಜೆ!
ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ದೈವ “ಕೋಡಿಹಳ್ಳಿ ಅಜ್ಜಯ್ಯ”ನವರ ಸೂಚನೆ ಹಾಗೂ ಸಲಹೆಯಂತೆಯೇ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಿದ್ದಾರೆ. ದಿನಾಂಕ ಹಾಗೂ ಸ್ಥಳದ ಆಯ್ಕೆಯಲ್ಲೂ ಅಜ್ಜಯ್ಯನವರ ಸಲಹೆಯನ್ನು ಸ್ವೀಕರಿಸಿಯೇ ಈ ತೀರ್ಮಾನಕ್ಕೆ ಬರಲಾಗಿದೆ.
ಸದ್ಯ ಪ್ರಮಾಣ ವಚನ ಕಾರ್ಯಕ್ರಮ ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ನಡೆಯಲು ಮತ್ತು ಬಿಗಿ ಭದ್ರತೆ ಕಲ್ಪಿಸಲು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ವಿಭಾಗಕ್ಕೆ ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ಲೋಕಭವನದಲ್ಲಿ ಸಕಲ ಸಿದ್ಧತೆಗಳು ಆರಂಭವಾಗಿವೆ.
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








