ನವದೆಹಲಿ : ದೇಶದ ಪಡಿತರ ವಿತರಣಾ ವ್ಯವಸ್ಥೆಯಲ್ಲಿ (Ration Distribution System) ನಡೆಯುವ ಅಕ್ರಮ ಹಾಗೂ ದಂಧೆಗಳಿಗೆ ಮುಕ್ತಿ ಹಾಡಲು ಕೇಂದ್ರ ಸರ್ಕಾರ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ವಂಚನೆ ಇಲ್ಲದೆ ಆಹಾರ ಧಾನ್ಯ ತಲುಪಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ “ಸಾರ್ಥಕ್ ಪಿಡಿಎಸ್” (Sarthak PDS) ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ.
ಏನಿದು ‘ಸಾರ್ಥಕ್ ಪಿಡಿಎಸ್’? ಇದರಿಂದ ಜನರಿಗೇನು ಲಾಭ?
ಇದು ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮುಖಾಂತರ ನಿಯಂತ್ರಿಸುವ ಹೊಸ ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ಅಪ್ಲಿಕೇಶನ್ ಆಗಿದೆ. ಇದರ ಮುಖ್ಯ ಉದ್ದೇಶ ರೇಷನ್ ವಿತರಣೆಯಲ್ಲಿ ಪಾರದರ್ಶಕತೆ ತರುವುದು.
ಲೈವ್ ಟ್ರ್ಯಾಕಿಂಗ್ (ರೇಷನ್ ಕಳ್ಳತನಕ್ಕೆ ಬ್ರೇಕ್): ಮುಖ್ಯ ಗೋದಾಮಿನಿಂದ ಹೊರಟ ಅಕ್ಕಿ-ಗೋದ್ರು ನ್ಯಾಯಬೆಲೆ ಅಂಗಡಿಗೆ ಎಷ್ಟು ತಲುಪಿದೆ ಮತ್ತು ಅಲ್ಲಿಂದ ಜನರಿಗೆ ಎಷ್ಟು ವಿತರಣೆಯಾಗಿದೆ ಎಂಬ ಪ್ರತಿಯೊಂದು ಮಾಹಿತಿಯೂ ಲೈವ್ ಟ್ರ್ಯಾಕ್ ಆಗಲಿದೆ. ಇದರಿಂದ ಮಧ್ಯವರ್ತಿಗಳ ಲೂಟಿ ಬಂದ್ ಆಗಲಿದೆ.
ಬಯೋಮೆಟ್ರಿಕ್ ಮತ್ತು ಆಧಾರ್ ಕಡ್ಡಾಯ: ಅರ್ಹ ಫಲಾನುಭವಿಗಳಿಗೆ ಮಾತ್ರ ರೇಷನ್ ಸಿಗುವಂತೆ ಮಾಡಲು ಬಯೋಮೆಟ್ರಿಕ್ ದೃಢೀಕರಣ ಮತ್ತು ಆಧಾರ್ ಲಿಂಕ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ.
ಸ್ಮಾರ್ಟ್ ರೇಷನ್ ಕಾರ್ಡ್ ಸೇವೆ: ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು, ತಿದ್ದುಪಡಿ ಮಾಡುವುದು ಹಾಗೂ ಕಾರ್ಡ್ ನಿರ್ವಹಣೆ ಪ್ರಕ್ರಿಯೆಗಳು ಇನ್ಮುಂದೆ ಅತ್ಯಂತ ಸುಲಭವಾಗಲಿವೆ.
₹25,530 ಕೋಟಿ ಬಜೆಟ್, 5 ವರ್ಷಗಳ ಟಾರ್ಗೆಟ್
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ದೇಶದ ಬರೋಬ್ಬರಿ 81.35 ಕೋಟಿ ಜನರಿಗೆ ಯಾವುದೇ ತಾರತಮ್ಯವಿಲ್ಲದೆ ಆಹಾರ ಧಾನ್ಯ ತಲುಪಿಸಲು ಈ ಯೋಜನೆ ಮೈಲಿಗಲ್ಲಾಗಲಿದೆ.
ಬೃಹತ್ ಅನುದಾನ: 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಈ ಯೋಜನೆಗಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ಬರೋಬ್ಬರಿ ₹25,530 ಕೋಟಿ ಹಣವನ್ನು ಮೀಸಲಿಟ್ಟಿದೆ.
ಅವಧಿ: ಈ ಡಿಜಿಟಲ್ ಯೋಜನೆ ಮುಂಬರುವ 5 ವರ್ಷಗಳ ಕಾಲ ಅಂದರೆ 31.03.2031ರ ವರೆಗೆ ಜಾರಿಯಲ್ಲಿರಲಿದೆ.
ರಾಜ್ಯಗಳಿಗೆ ನೆರವು: ಆಹಾರ ಧಾನ್ಯಗಳ ಸಾಗಣೆ, ಗೋದಾಮುಗಳ ನಿರ್ವಹಣೆ ಹಾಗೂ ರೇಷನ್ ಅಂಗಡಿ ಡೀಲರ್ಗಳ ಮಾರ್ಜಿನ್ ವೆಚ್ಚವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಹಾಯ ಹಸ್ತ ಚಾಚಲಿದೆ.
ಎರಡು ಯೋಜನೆಗಳು ಒಂದೇ ಸೂರಿನಡಿ! (Umbrella Scheme)
ಸಚಿವ ಪ್ರಲ್ಹಾದ ಜೋಶಿ ಅವರ ಪ್ರಕಾರ, ಇದು ಎರಡು ಪ್ರಮುಖ ಯೋಜನೆಗಳನ್ನು ಒಳಗೊಂಡ ಒಂದು ಛತ್ರಿ ಯೋಜನೆಯಾಗಿದೆ. ಇದು ರಾಜ್ಯಗಳ ಒಳಗಿನ ಆಹಾರ ಸಾಗಣೆ ಮತ್ತು ವಿತರಕರ ಲಾಭಾಂಶವನ್ನು ನಿಯಂತ್ರಿಸುವುದರ ಜೊತೆಗೆ, ‘ಸ್ಮಾರ್ಟ್ ಪಿಡಿಎಸ್’ (SMART PDS) ಮೂಲಕ ಇಡೀ ಪಡಿತರ ವ್ಯವಸ್ಥೆಯನ್ನು ಮಾಡರ್ನ್ ಮಾಡಲಿದೆ.
ವಿಮಾನ ಟಿಕೆಟ್ ದಂಧೆಕೋರರಿಗೆ ಸಚಿವರ ಖಡಕ್ ವಾರ್ನಿಂಗ್!
ಇದೇ ವೇಳೆ, ಆನ್ಲೈನ್ ಟಿಕೆಟ್ ಬುಕಿಂಗ್ ಆ್ಯಪ್ಗಳು ವಿಮಾನ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ವಂಚನೆಯ ಜಾಲವನ್ನು ಗ್ರಾಹಕರೊಬ್ಬರು ಬಯಲಿಗೆಳೆದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಪ್ರಲ್ಹಾದ ಜೋಶಿ, ತಕ್ಷಣ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (CCPA) ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ‘ಸಾರ್ಥಕ್ ಪಿಡಿಎಸ್’ ತಂತ್ರಜ್ಞಾನವು ಪಡಿತರ ಚೀಟಿದಾರರ ಪಾಲಿಗೆ ವರದಾನವಾಗಲಿದ್ದು, ರೇಷನ್ ಅಂಗಡಿಗಳಲ್ಲಿ ನಡೆಯುವ ಅಕ್ರಮಗಳಿಗೆ ಶಾಶ್ವತ ಮುಕ್ತಿ ಸಿಗುವ ನಿರೀಕ್ಷೆಯಿದೆ.








