ಬೆಂಗಳೂರು: ರಾಜ್ಯದ ಫಲಪುಪ್ಪಗಳ ಗಿರಿಧಾಮ ನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಮೇ.31 ರಂದು ಭಾನುವಾರ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅತಿಥ್ಯವನ್ನು ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಹಿಸಿಕೊಂಡಿದ್ದು ರಾಜ್ಯದ ಸುಮಾರು 200 ಕ್ಕೂ ಹೆಚ್ಚು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದೆಂದರು.
ಭಾರತ ರತ್ನ ಸರ್‌ಎಂವಿ, ಖ್ಯಾತ ವಿಜ್ಞಾನಿ ಸಿಎನ್‌ಆರ್ ರಾವ್ ರವರ ಹುಟ್ಟಿ ಬೆಳೆದ ಚಿಕ್ಕಬಳ್ಳಾಪುರ ಜಿಲ್ಲೆಯು ನಾಡಿಗೆ ಅನೇಕ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ್ದು, ಅನೇಕ ಐತಿಹ್ಯಗಳನ್ನು ಜಿಲ್ಲೆಯು ಹೊಂದಿದೆ. ವಿಶೇಷವಾಗಿ ಫಲಪುಪ್ಪಗಳ ಗಿರಿಧಾಮ ನಾಡನಾಗಿ ಗಮನ ಸೆಳೆದಿದೆ. ಈ ಹಿನ್ನಲೆಯಲ್ಲಿ ಪ್ರತಿಭಾ ಪುರಸ್ಕಾರ ಪ್ರದಾನವನ್ನು ಈ ಬಾರಿಗೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಅರ್ಥಪೂರ್ಣವಾಗಿ ಕಾರ್ಯಕ್ರಮದ ಯಶಸ್ವಿಗೆ ಸಿದ್ದತೆ ಮಾಡಿಕೊಂಡಿದೆ ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಕರ್ತರ ಮಕ್ಕಳಿಗೆ ರಾಜ್ಯ ಸಂಘದಿಂದ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ 3000 ಸಾವಿರ ರೂ, ನಗದು, ಸ್ಮರಣಿಕೆ, ಅಭಿನಂದನಾ ಪತ್ರ ವಿತರಿಸಲಾಗುತ್ತಿದೆ ಎಂದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಭಾಗಿ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲೆಯ ನಿಕಪೂಟ ಜಿಲ್ಲಾ ಉಸ್ತುವಾರಿಗಳಾದ ರಾಜ್ಯದ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ನೆರವೇರಿಸಲಿದ್ದಾರೆ. ಅಭಿನಂದನಾ ನುಡಿಯನ್ನು ಕ್ಷೇತ್ರದ ಸಂಸದರಾದ ಡಾ.ಕೆ.ಸುಧಾಕರ್ ಮಾಡಲಿದ್ದು, ಪ್ರತಿಭಾ ಪುರಸ್ಕಾರವನ್ನು ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರು ಆಗಿದ್ದ ಕೆ.ವಿ.ಪ್ರಭಾಕರ್ ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಶಿವಾನಂದ ತಗಡೂರು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷರಾದ ವಿ.ರವಿಕುಮಾರ್ ಮಾತನಾಡಿ, ಇಡೀ ರಾಜ್ಯಕ್ಕೆ ಮಾದರಿ ಆಗುವ ರೀತಿಯಲ್ಲಿ ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾ ಸಂಘ ಅತಿಥ್ಯ ವಹಿಸಿ ಹಲವು ಸಿದ್ದತೆಗಳನ್ನು ಮಾಡಿಕೊಂಡಿದ್ದು, ಕಾರ್ಯಕ್ರಮದಲ್ಲಿ ಮಾಧ್ಯಮ ಹಾಗೂ ಸ್ತ್ರೀಶಕ್ತಿ ಸಂಘಗಳು ತಯಾರಿಸಿ ಉತ್ಪನ್ನಗಳ ಮಾರಾಟ ಹಾಗೂ ವಸ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ರಾಜ್ಯ ಸಮಿತಿ ಸದಸ್ಯರಾದ ಎನ್.ಚಂದ್ರಶೇಖರ್ ಸೇರಿದಂತೆ ಮತ್ತಿತರರು ಇದ್ದರು








