ನವದೆಹಲಿ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಭೀಕರವಾಗಿ ಹರಡುತ್ತಿರುವ ‘ಬಂಡಿಬುಗ್ಯೊ ಎಬೋಲಾ’ (Bundibugyo Ebola) ವೈರಸ್ ಸೋಂಕನ್ನು ನಿಯಂತ್ರಿಸಲು, ಭಾರತ ಸರ್ಕಾರವು ಮೊದಲ ಹಂತದ ತುರ್ತು ವೈದ್ಯಕೀಯ ನೆರವನ್ನು ಆಫ್ರಿಕಾಕ್ಕೆ ಕಳುಹಿಸಿದೆ.
ಶುಕ್ರವಾರ ನಡೆದ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, ಈ ಮಾನವೀಯ ನೆರವು ಯಶಸ್ವಿಯಾಗಿ ತಲುಪಿದೆ ಎಂದು ಖಚಿತಪಡಿಸಿದ್ದಾರೆ. ಅಲ್ಲದೆ, ಈ ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಫ್ರಿಕಾ ಖಂಡದೊಂದಿಗೆ ಭಾರತ ಸದಾ ಬೆಂಬಲಕ್ಕೆ ನಿಲ್ಲಲಿದೆ ಎಂದು ಅವರು ಪುನರುಚ್ಚರಿಸಿದರು.
”ವೈದ್ಯಕೀಯ ನೆರವು ನೀಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ನಾವು ಆಫ್ರಿಕಾ ಸಿಡಿಸಿ (Africa CDC) ಗೆ ಅಗತ್ಯ ಸರಬರಾಜುಗಳನ್ನು ಕಳುಹಿಸಿದ್ದೇವೆ. ಇವುಗಳನ್ನು ಉಗಾಂಡದಲ್ಲಿರುವ ನಮ್ಮ ಹೈ ಕಮಿಷನರ್ ಅವರು ಹಸ್ತಾಂತರಿಸಿದ್ದಾರೆ. ಆಫ್ರಿಕಾದಲ್ಲಿನ ಈ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಮಗೆ ಸಾಧ್ಯವಾದಷ್ಟು ಎಲ್ಲ ರೀತಿಯ ಸಹಾಯವನ್ನು ಮುಂದುವರಿಸುತ್ತೇವೆ. ಇದು ಮೊದಲ ಹಂತದ ಸರಬರಾಜು ಮಾತ್ರವಾಗಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ” ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಬುಧವಾರ ಈ ತುರ್ತು ಔಷಧಿಗಳು ತಲುಪಿದ ನಂತರ, ಆಫ್ರಿಕಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (Africa CDC) ಭಾರತ ಸರ್ಕಾರ ಮತ್ತು ಜನತೆಗೆ ಧನ್ಯವಾದ ಅರ್ಪಿಸಿದೆ. ಎಕ್ಸ್ (X) ವೇದಿಕೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸಂಸ್ಥೆ, “ಕಾಂಗೋದಲ್ಲಿ ಎಬೋಲಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಭಾರತ ಸರ್ಕಾರ ನೀಡಿದ ಉದಾರವಾದ ವೈದ್ಯಕೀಯ ನೆರವನ್ನು ನಾವು ಸ್ವಾಗತಿಸುತ್ತೇವೆ. ಉಗಾಂಡದಲ್ಲಿ ನಮ್ಮ ತಂಡಕ್ಕೆ ಈ ಪರಿಕರಗಳು ತಲುಪಿವೆ. ಇವುಗಳಲ್ಲಿ ಅಗತ್ಯವಾದ ಡಯಾಗ್ನೋಸ್ಟಿಕ್ ಕಿಟ್‌ಗಳು, ಚಿಕಿತ್ಸಕ ಔಷಧಿಗಳು, ಸೋಂಕು ತಡೆಗಟ್ಟುವ ಪರಿಕರಗಳು ಸೇರಿವೆ. ಇವುಗಳನ್ನು ಶೀಘ್ರವೇ ಕಾಂಗೋದ ಪೂರ್ವ ಭಾಗದ ಬಾಧಿತ ಸಮುದಾಯಗಳಿಗೆ ಕಳುಹಿಸಲಾಗುವುದು” ಎಂದು ತಿಳಿಸಿದೆ.








