ಬೆಂಗಳೂರು: ಸಾಮಾಜಿಕ ಜಾಲತಾಣ ‘ಸ್ನ್ಯಾಪ್ಚಾಟ್’ (Snapchat) ಮೂಲಕ ಪರಿಚಯವಾಗಿ, ಪ್ರೇಮ ವಿವಾಹವಾಗಿದ್ದ ದಂಪತಿಗಳ ನಡುವೆ ಮದುವೆಯಾದ ಎರಡೇ ತಿಂಗಳಿಗೆ ಬಿರುಕು ಮೂಡಿದೆ. ಸಣ್ಣಪುಟ್ಟ ಕೌಟುಂಬಿಕ ಗಲಾಟೆಯ ಕಾರಣಕ್ಕೆ ಪತಿ ತನ್ನನ್ನು ತಿರಸ್ಕರಿಸಿದ್ದಾನೆ ಎಂದು ನೊಂದ ಪತ್ನಿಯೊಬ್ಬರು ತನಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಮೂಲತಃ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿಯಾದ ಚೇತನ್ ಹಾಗೂ ನರ್ಸಿಂಗ್ ವೃತ್ತಿ ಮಾಡಿಕೊಂಡಿದ್ದ ಮಹಿಳೆಯ ನಡುವೆ ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ಚಾಟ್ನಲ್ಲಿ ಪರಿಚಯವಾಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಹಾಗೂ ಚೇತನ್ ನಡುವಿನ ಸ್ನೇಹ ದಿನಕಳೆದಂತೆ ಗಾಢವಾಗಿ ಪ್ರೀತಿಗೆ ತಿರುಗಿತ್ತು. ಎರಡು ತಿಂಗಳ ಹಿಂದಷ್ಟೇ ಇವರಿಬ್ಬರು ಸಪ್ತಪದಿ ತುಳಿದಿದ್ದರು.
ಹೆಂಡತಿ ಬೇಡ ಎಂದ ಪತಿ: ಕಾರಣವೇನು?
ಮದುವೆಯಾದ ಮಹಿಳೆಗೆ ತಂದೆ-ತಾಯಿ ಇರಲಿಲ್ಲ ಎನ್ನಲಾಗಿದೆ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ಆರಂಭವಾಗಿದೆ. “ಮನೆಯಲ್ಲಿ ತಂದೆ-ತಾಯಿಗೆ ಪತ್ನಿ ಸರಿಯಾಗಿ ಗೌರವ ನೀಡುತ್ತಿಲ್ಲ” ಎಂಬ ಕಾರಣವನ್ನು ಮುಂದಿಟ್ಟುಕೊಂಡು ಇಬ್ಬರ ನಡುವಿನ ಕೌಟುಂಬಿಕ ಕಲಹ ತಾರಕಕ್ಕೇರಿದೆ. ಈ ಗಲಾಟೆ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಮದುವೆಯಾದ ಕೇವಲ ಎರಡೇ ತಿಂಗಳಿಗೆ ಚೇತನ್ “ನನಗೆ ಹೆಂಡತಿ ಬೇಡ” ಎಂದು ಆಕೆಯನ್ನು ದೂರ ತಳ್ಳಿದ್ದಾನೆ.
ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
ತಂದೆ-ತಾಯಿಯೂ ಇಲ್ಲದೆ, ಇತ್ತ ಮದುವೆಯಾದ ಪತಿಯೂ ಕೈಬಿಟ್ಟಿದ್ದರಿಂದ ದಿಕ್ಕುತೋಚದಂತಾದ ಮಹಿಳೆ ತನಗೆ ಪತಿ ಬೇಕೇ ಬೇಕು ಎಂದು ಪಟ್ಟು ಹಿಡಿದು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.








