ಬೆಂಗಳೂರು :ತುರ್ತು ಸಂದರ್ಭಗಳಲ್ಲಿ ಸಹಾಯವಾಗಲಿ ಎಂಬ ಕಾರಣಕ್ಕೆ ಇಂದು ಬಹುತೇಕರು ಕ್ರೆಡಿಟ್ ಕಾರ್ಡ್ಗಳನ್ನು ಬಳಸುತ್ತಿದ್ದಾರೆ. ಕೆಲವರ ಬಳಿಯಂತೂ ಒಂದಕ್ಕಿಂತ ಹೆಚ್ಚು ಕಾರ್ಡ್ಗಳಿರುತ್ತವೆ. ಕೈಯಲ್ಲಿ ಹಣವಿಲ್ಲದಿದ್ದರೂ ತಕ್ಷಣಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು, ಇನ್ಸ್ಟಂಟ್ ಡಿಸ್ಕೌಂಟ್ ಹಾಗೂ ಕ್ಯಾಶ್ಬ್ಯಾಕ್ ಆಫರ್ಗಳನ್ನು ಪಡೆಯಲು ಕ್ರೆಡಿಟ್ ಕಾರ್ಡ್ ಉತ್ತಮ ಆಯ್ಕೆಯಾಗಿದೆ. ಆದರೆ, ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ನಮ್ಮನ್ನು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ದೂಡಬಹುದು. ಅದರಲ್ಲಿ ಪ್ರಮುಖವಾದದ್ದು ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂ (ATM) ನಿಂದ ಹಣ ಡ್ರಾ ಮಾಡುವುದು.
ಎಟಿಎಂನಿಂದ ಹಣ ಡ್ರಾ ಮಾಡಿದರೆ ಏನಾಗುತ್ತದೆ?
ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮೂಲಕ ಡಿಜಿಟಲ್ ರೂಪದಲ್ಲಿ ಶಾಪಿಂಗ್ ಮಾಡಿದರೆ ಅಥವಾ ಪೇಮೆಂಟ್ ಮಾಡಿದರೆ, ಬಿಲ್ ಪಾವತಿಸಲು 45 ದಿನಗಳವರೆಗೆ ಬಡ್ಡಿ ರಹಿತ ಸಮಯ ಸಿಗುತ್ತದೆ. ಈ ಅವಧಿಯಲ್ಲಿ ಯಾವುದೇ ಬಡ್ಡಿ ಇರುವುದಿಲ್ಲ. ಆದರೆ, ಅದೇ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು (Cash) ಡ್ರಾ ಮಾಡಿದರೆ, ಈ 45 ದಿನಗಳ ರಿಯಾಯಿತಿ ಅನ್ವಯಿಸುವುದಿಲ್ಲ.
ನೀವು ಎಟಿಎಂನಿಂದ ಹಣ ಡ್ರಾ ಮಾಡಿದ ಅದೇ ದಿನದಿಂದಲೇ ಬಡ್ಡಿ ಲೆಕ್ಕಾಚಾರ ಆರಂಭವಾಗುತ್ತದೆ. ಇದರೊಂದಿಗೆ ‘ಕ್ಯಾಶ್ ಅಡ್ವಾನ್ಸ್ ಫೀಸ್’ (Cash Advance Fee) ಹೆಸರಿನಲ್ಲಿ ಹೆಚ್ಚುವರಿ ಶುಲ್ಕವನ್ನೂ ವಸೂಲಿ ಮಾಡಲಾಗುತ್ತದೆ. ಹಾಗಾಗಿ, ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಹಣ ಡ್ರಾ ಮಾಡದೇ ಇರುವುದೇ ಜಾಣತನ.
ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ:
ಒಂದು ಕಾರ್ಡ್ ಬಿಲ್ ತೀರಿಸಲು ಮತ್ತೊಂದು ಕಾರ್ಡ್ ಬಳಕೆ: ಒಂದು ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲವನ್ನು ತೀರಿಸಲು ಮತ್ತೊಂದು ಕ್ರೆಡಿಟ್ ಕಾರ್ಡ್ ಬಳಸುವುದು ಅತ್ಯಂತ ಅಪಾಯಕಾರಿ. ಇದು ತಾತ್ಕಾಲಿಕವಾಗಿ ನಿರಾಳತೆ ನೀಡಿದರೂ, ಬಡ್ಡಿಯ ಮೇಲೆ ಬಡ್ಡಿ ಬೆಳೆದು ನಿಮ್ಮನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ.
ಆಫರ್ ನೋಡಿ ಆತುರದ ಖರೀದಿ: ಆನ್ಲೈನ್ನಲ್ಲಿ ಸಿಗುವ ಆಫರ್ಗಳನ್ನು ನೋಡಿ ಆವೇಶಕ್ಕೆ ಒಳಗಾಗಿ ಅನಗತ್ಯ ವಸ್ತುಗಳನ್ನು ಖರೀದಿಸಬೇಡಿ. ಆಮೇಲೆ ಪಶ್ಚಾತ್ತಾಪ ಪಡುವುದಕ್ಕಿಂತ ಮುಂಚೆಯೇ ಯೋಚಿಸುವುದು ಒಳ್ಳೆಯದು.
ಯೋಜನೆ ಇಲ್ಲದ ಖರ್ಚು: ಯಾವುದೇ ಪ್ಲಾನಿಂಗ್ ಇಲ್ಲದೆ ಕ್ರೆಡಿಟ್ ಕಾರ್ಡ್ ಸಿಕ್ಕಿತು ಎಂದು ಖರ್ಚು ಮಾಡಿದರೆ, ಕೊನೆಗೆ ಬಿಲ್ ಕಟ್ಟಲು ಒದ್ದಾಡಬೇಕಾಗುತ್ತದೆ. ಮುಂದಿನ ತಿಂಗಳು ಬಿಲ್ ಹೇಗೆ ಪಾವತಿಸಬೇಕು ಎಂಬುದನ್ನು ಮೊದಲೇ ಲೆಕ್ಕಾಚಾರ ಮಾಡಿಕೊಂಡು, ಅದಕ್ಕೆ ತಕ್ಕಂತೆ ಕಾರ್ಡ್ ಬಳಸಿ.
ಈ ಸರಳ ಆರ್ಥಿಕ ನಿಯಮಗಳನ್ನು ಪಾಲಿಸುವ ಮೂಲಕ ನೀವು ಕ್ರೆಡಿಟ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಬಳಸಬಹುದು ಮತ್ತು ಸಾಲದ ಸುಳಿಯಿಂದ ಮುಕ್ತರಾಗಬಹುದು. ನಿಮ್ಮ ಬಳಿಯೂ ಕ್ರೆಡಿಟ್ ಕಾರ್ಡ್ ಇದೆಯೇ? ಹಾಗಾದರೆ ಇಂದಿನಿಂದಲೇ ಜಾಗರೂಕರಾಗಿರಿ!








