ಬೆಂಗಳೂರು: 2026ನೇ ಸಾಲಿನ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಯ ಮೊದಲನೇ ಸುತ್ತಿನ ಸೀಟು ಹಂಚಿಕೆಯ ನೈಜ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಕಟಿಸಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿವಿಧ ವಸತಿ ಶಾಲೆಗಳ ಪ್ರವೇಶಕ್ಕಾಗಿ ಈ ಪ್ರಕ್ರಿಯೆ ನಡೆದಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.
ಯಾವ ಶಾಲೆಗಳು?
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ|| ಬಿ.ಆರ್. ಅಂಬೇಡ್ಕರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಂಗೊಳ್ಳಿ ರಾಯಣ್ಣ, ಕವಿರತ್ನ, ಗಾಂಧಿತತ್ವ ಹಾಗೂ ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳು.
ಅಭ್ಯರ್ಥಿಗಳು ನಮೂದಿಸಿದ ಇಚ್ಛೆ/ಆಯ್ಕೆಗಳನ್ನು (Options) ಪರಿಗಣಿಸಿ, ಸಂಪೂರ್ಣವಾಗಿ ಮೆರಿಟ್ ಆಧಾರದ ಮೇಲೆ ನಿಯಮಾನುಸಾರ ಈ ಸೀಟು ಹಂಚಿಕೆ ಮಾಡಲಾಗಿದೆ. ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ದಿನಾಂಕ 30-05-2026 ರೊಳಗಾಗಿ ಸಂಬಂಧಪಟ್ಟ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪ್ರಾಧಿಕಾರವು ಸೂಚಿಸಿದೆ.
ಸೀಟು ಸಿಕ್ಕಿರುವ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ (ಮೇ 30, 2026) ಪ್ರವೇಶ ಪಡೆಯುವುದನ್ನು ತಪ್ಪಿಸಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







