ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಯಾದ ‘ಇ-ಸ್ವತ್ತು 2.0’ (E-Swathu 2.0) ತಂತ್ರಾಂಶದ ಸೇವೆಗಳನ್ನು ಇನ್ಮುಂದೆ ಮತ್ತಷ್ಟು ಸುಲಭವಾಗಿ ಪಡೆಯಬಹುದು. ಇ-ಸ್ವತ್ತು ಮೂಲಕ ನಮೂನೆಗಳನ್ನು (Forms) ಪಡೆಯಲು ಹಾಗೂ ಅರ್ಜಿಗಳನ್ನು ಸಲ್ಲಿಸಲು ಗ್ರಾಮೀಣ ಮತ್ತು ನಗರ ಭಾಗದ ನಾಗರಿಕರಿಗೆ ಅನುಕೂಲವಾಗುವಂತೆ ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One) ಮತ್ತು ಬೆಂಗಳೂರು ಒನ್ (Bengaluru One) ಕೇಂದ್ರಗಳಲ್ಲೂ ಅವಕಾಶ ಕಲ್ಪಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಕುರಿತು ಸರ್ಕಾರದ ಆದೇಶ ಸಂಖ್ಯೆ: RDPR / 73 / GPA / 2026 ರನ್ವಯ ಆದೇಶ ಹೊರಡಿಸಿದ್ದು, ಈ ಹೊಸ ಸೇವೆಗೆ ನಿಗದಿಪಡಿಸಲಾಗಿರುವ ಶುಲ್ಕದ ವಿವರಗಳನ್ನು ಪ್ರಕಟಿಸಿದೆ.
ಅರ್ಜಿ ಶುಲ್ಕದ ವಿವರಗಳು:
ವಿವಿಧ ನಾಗರಿಕ ಸೇವಾ ಕೇಂದ್ರಗಳಲ್ಲಿ ಇ-ಸ್ವತ್ತು 2.0 ಅರ್ಜಿ ಸಲ್ಲಿಸಲು ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಶುಲ್ಕದ ಪಟ್ಟಿ ಹೀಗಿದೆ:
ಈ ಹಿಂದೆ ಇ-ಸ್ವತ್ತು 2.0 ತಂತ್ರಾಂಶದ ಮೂಲಕ ನಮೂನೆಗಳನ್ನು ಪಡೆಯಲು ಮತ್ತು ಅರ್ಜಿಗಳನ್ನು ಸಲ್ಲಿಸಲು ‘ಬಾಪೂಜಿ ಸೇವಾ ಕೇಂದ್ರಗಳ’ ಮೂಲಕ ಅವಕಾಶ ನೀಡಿ, ಪ್ರತಿ ಅರ್ಜಿಗೆ ರೂ. 100/- ಶುಲ್ಕ ನಿಗದಿಪಡಿಸಿ ಆದೇಶಿಸಲಾಗಿತ್ತು. ಆದರೆ, ಸಾರ್ವಜನಿಕರಿಗೆ ಈ ಸೇವೆ ಇನ್ನು ಹೆಚ್ಚಿನ ಕಡೆಗಳಲ್ಲಿ ಮತ್ತು ಕೈಗೆಟುಕುವ ದರದಲ್ಲಿ ಸಿಗಬೇಕೆಂಬ ಉದ್ದೇಶದಿಂದ ಪಂಚಾಯತ್ ರಾಜ್ ಆಯುಕ್ತಾಲಯವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಸರ್ಕಾರ, ಸಾರ್ವಜನಿಕರ ಅನುಕೂಲಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಈ ಸೇವೆಯನ್ನು ವಿಸ್ತರಿಸಲು ಗ್ರೀನ್ ಸಿಗ್ನಲ್ ನೀಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ನಾಗರಿಕರು ತಮ್ಮ ಆಸ್ತಿ ಇ-ಸ್ವತ್ತು ದಾಖಲೆಗಳ ಕೆಲಸಗಳಿಗಾಗಿ ಇನ್ನು ಮುಂದೆ ಅಲೆದಾಡುವುದು ತಪ್ಪಲಿದ್ದು, ಮನೆಯ ಹತ್ತಿರದ ಸೇವಾ ಕೇಂದ್ರಗಳಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.









