ಮಂಡ್ಯ : ಯಾರೇ ಜನಪ್ರತಿನಿಧಿಗಳು, ದೊಡ್ಡ ವ್ಯಕ್ತಿಗಳು, ನಮ್ಮ ಸಂಬಂಧಿಕರೇ ಸರ್ಕಾರಿ ಜಮೀನು, ಗೋಮಾಳ, ಸ್ಮಶಾನ ಜಾಗಗಳನ್ನು ಒತ್ತುವರಿ ಮಾಡಿದ್ದರೇ ಯಾವುದೇ ಮುಲಾಜಿಲ್ಲದೆ ತೆರವು ಕಾರ್ಯಾಚರಣೆ ಮಾಡಬೇಕು ಇಲ್ಲದಿದ್ದರೆ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ದ ತಲೆದಂಡವಾಗುವುದು ಶತಸಿದ್ಧ ಎಂದು ಶಾಸಕ ಕೆ.ಎಂ.ಉದಯ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮದ್ದೂರು ತಾಲೂಕಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸುಮಾರು ವರ್ಷಗಳಿಂದ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದು, ಇದನ್ನು ತೆರವು ಮಾಡುವ ಬಗ್ಗೆ ಪಿಡಿಓ ಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಂದಾಯ, ಸರ್ವೆ, ಹಾಗೂ ಪೋಲೀಸ್ ಇಲಾಖೆ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಹಾಗೂ ಅಗತ್ಯ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳಬೇಕು. ಆಶ್ರಯ ಯೋಜನೆಯಡಿ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸುಮಾರು 40 ಎಕರೆ ಪ್ರದೇಶಗಳನ್ನು ಗುರುತಿಸಲಾಗಿದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಬೇಕು. ಕೆಲವು ಗ್ರಾಮಗಳಲ್ಲಿ ಆಶ್ರಯ ಯೋಜನೆಗೆ ಮೀಸಲಿಟ್ಟಿರುವ ಜಾಗಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪಿಡಿಓ ಗಳು ಹೇಳುತ್ತಿದ್ದಂತೆಯೇ ಶಾಸಕರು ಮಾತನಾಡಿ ಆ ರೀತಿ ಆಗಿರುವ ಕಡೆಗಳಲ್ಲಿ ಕೂಡಲೇ ಸಂಬಂಧಪಟ್ಟ ಪಿಡಿಓ ಗಳು ಸರ್ವೆ ನಡೆಸಲು ತಾಲೂಕು ಕಚೇರಿಗೆ ಅರ್ಜಿ ಕೊಡಿ ಸರ್ವೆ ನಡೆಸಿದ ಬಳಿಕ ಪೋಲೀಸ್ ಬಂದೋಬಸ್ತ್ನಲ್ಲಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಗ್ರಾಪಂ ವ್ಯಾಪ್ತಿಯ ವಿಎ ಹಾಗೂ ಆರ್.ಐ ಗಳು ಸಂಬಂಧಪಟ್ಟ ಪಿಡಿಓಗಳೊಂದಿಗೆ ಸ್ಥಳಕ್ಕೆ ಹೋಗಿ ಜಾಗಗಳನ್ನು ಗುರುತಿಸಬೇಕು ನಂತರ ಅರ್ಹ ವಸತಿ ರಹಿತ ಬಡವರನ್ನು ಗುರುತಿಸಬೇಕು. ಈ ವಿಷಯದಲ್ಲಿ ಯಾವುದೇ ಗೊಂದಲಗಳು, ತೊಂದರೆಗಳು ಇದ್ದರೆ ತಹಸೀಲ್ದಾರ್ ಹಾಗೂ ತಾಪಂ ಇಓ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಅಷ್ಟೇ ಅಲ್ಲದೇ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಜಾಗಗಳನ್ನು ಗುರುತಿಸಬೇಕು ಎಂದರು.
ಅಷ್ಟೇ ಅಲ್ಲದೇ ತಾಲೂಕು ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಸ್ಮಶಾನ ಜಾಗಗಳಿದೆ ಆದರೆ ಸಾರ್ವಜನಿಕ ಸ್ಮಶಾನವಿಲ್ಲವೆಂಬ ಕೂಗು ಕೇಳಿಬರುತ್ತಿದೆಯೆಂದರೆ ಅಂತಹ ಕಡೆಗಳಲ್ಲಿ ಒತ್ತುವರಿಯಾಗಿದೆ ಎಂದರ್ಥ ಹೀಗಾಗಿ ಸ್ಮಶಾನದ ಜಾಗಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಸ್ಮಶಾನದ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ಪಿಡಿಓಗಳ ಜವಾಬ್ದಾರಿಯಾಗಿದೆ ಎಂದರು.
ಮುಂದಿನ ಜುಲೈ ತಿಂಗಳಲ್ಲಿ ಮತ್ತೊಮ್ಮೆ ಪಿಡಿಓಗಳ ಸಭೆ ಕರೆಯಲಾಗುವುದು. ಆ ಸಭೆಯಲ್ಲಿ ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಬೇಕು. ಇಲ್ಲದಿದರೆ ಅಂತಹ ಪಿಡಿಒಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಪಿಡಿಓಗಳು ಆಶ್ರಯ ಯೋಜನೆಯಡಿ ವಸತಿ ನಿರ್ಮಾಣದ ಉದ್ದೇಶಕ್ಕೆ ನೀಡುವ ಜಾಗವನ್ನು ಕಂದಾಯ ಇಲಾಖೆಯ ಮಾರ್ಗಸೂಚಿಗಳಂತೆ ನೀಡಬೇಕು. ಸರ್ಕಾರಿ ಜಮೀನುಗಳನ್ನು ಒತ್ತುವರಿಯಾಗಿರುವ ಬಗ್ಗೆ ಪಿಡಿಓ ಗಳು ಕಂದಾಯ, ಸರ್ವೆ ಇಲಾಖೆಯ ಸಹಯೋಗದಲ್ಲಿ ಒತ್ತುವರಿ ತೆರವು ಮಾಡಿ ಆ ಜಾಗದ ಸುತ್ತಲೂ ಗಿಡ ಅಥವಾ ಗುಂಡಿ ತೋಡಿಸಿ ಗಡಿ ಗುರುತಿಸಬೇಕು ಎಂದರು.
ಸಭೆಯಲ್ಲಿ ತಾಪಂ ಇಓ ರಾಮಲಿಂಗಯ್ಯ, ಯೋಜನಾಧಿಕಾರಿ ಸುರೇಶ್, ಎಡಿಎಲ್ಆರ್ ಲಿಖಿತಾ ಹಾಗೂ ಗ್ರಾಪಂ ಆಡಳಿತಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಪಿಡಿಒಗಳು ಇದ್ದರು.








