ಮಂಡ್ಯ : ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಹೀಗಾಗಿ ಕ್ಷೇತ್ರದಲ್ಲಿ ವಿಶೇಷವಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.
ಮದ್ದೂರು ನಗರದ ಕೊಲ್ಲಿ ವೃತ್ತದ ಬಳಿ ಶಿಂಷಾ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಂದಾಜು 4.50 ಕೋಟಿ ರೂ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಕಲ ಜೀವಿಗಳಿಗೆ ನೀರು ಅತ್ಯವಶ್ಯಕವಾಗಿದ್ದು, ನಮ್ಮ ಹಿರಿಯರು ಉಳಿಸಿರುವ ಜಲ ಮೂಲಗಳನ್ನು ಸಂರಕ್ಷಿಸಿ ಭವಿಷ್ಯದ ಪೀಳಿಗೆಗೂ ಉಳಿಸಬೇಕಾಗಿದೆ. ಶಿಂಷಾ ಬಲ ದಂಡೆ ನಾಲಾ ವ್ಯಾಪ್ತಿಯ ಕೆರೆಗಳಿಗೆ ತಗ್ಗಹಳ್ಳಿ ಅಣೆಯಿಂದ ನೀರನ್ನು ಪೂರೈಸಲಾಗುತ್ತಿದೆ. ಆದರೆ, ನಾಲೆಗಳ ದುಸ್ಥಿತಿಯಿಂದಾಗಿ ಕೊನೆ ಭಾಗದ ಕೆ.ಹಾಗಲಹಳ್ಳಿ ಕೆರೆಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೆ.ಕೋಡಿಹಳ್ಳಿ ಏತ ನೀರಾವರಿ ಯೋಜನೆ ಬಳಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದರಿಂದ ಸೋಮನಹಳ್ಳಿ, ರುದ್ರಾಕ್ಷಿಪುರ, ತೈಲೂರು ಕೆರೆಗಳು ಭರ್ತಿಯಾಗಿ ಬಳಿಕ ಆಲೂರು, ನೀಲಕಂನಹಳ್ಳಿ, ಕೆ.ಹಾಗಲಹಳ್ಳಿ ಕೆರೆಗಳು ಭರ್ತಿಯಾಗಲಿದ್ದು, ಇದರ ಜೊತೆಗೆ ಬನ್ನಹಳ್ಳಿ ಏತ ನೀರಾವರಿ ಯೋಜನೆಯ ಮೂಲಕವು ಈ ಭಾಗದ ಕೆರೆಗಳ ಭರ್ತಿಗೆ ಅನುಕೂಲ ಕಲ್ಪಿಸಲಾಗುತ್ತಿದ್ದು, ಇದರಿಂದ ರೈತರ ಬೇಸಾಯಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಸೂಳೆಕೆರೆ, ಮದ್ದೂರು ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಜೊತೆಗೆ ಹಲವಾರು ಕೆರೆ, ಕಟ್ಟೆ ಹಾಗೂ ನಾಲೆಗಳ ಅಭಿವೃದ್ಧಿಗೆ 800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಒತ್ತು ನೀಡಲಾಗುತ್ತಿದೆ. ಇನ್ನುಳಿದ ಎರಡು ವರ್ಷಗಳಲ್ಲಿ ಕ್ಷೇತ್ರದ ನೀರಾವರಿ ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಬಗೆಹರಿಸಲಾಗುವುದು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೆರೆ ಒತ್ತುವರಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಲಸಂರಕ್ಷಣೆಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಹೀಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಒತ್ತುವರಿ ತೆರವುಗೊಳಿಸಬೇಕಾಗಿದೆ ಎಂದರು.
ನನ್ನ ಮೇಲೆ ಕ್ಷೇತ್ರದ ಜನತೆ ಸಾಕಷ್ಟು ಭರವಸೆ ಇಟ್ಟಿದ್ದು, ನಿಮ್ಮ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮತ್ತಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತೈಲೂರು ರಘು, ಸಿಪಾಯಿ ಶ್ರೀನಿವಾಸ್, ರಾಜೇಂದ್ರ ಕುಮಾರ್, ಹನುಮೇಗೌಡ, ಅಪ್ಪೇಗೌಡ, ರಾಣಿ ಸತೀಶ್, ಶ್ರೀನಿವಾಸ್, ರಾಜು, ವೆಂಕಟೇಶ್, ಶಂಕರ್, ಶಿವರಾಜ್, ಸುರೇಶ್, ಪುಟ್ಟಪ್ಪ, ನಂದೀಶ್, ಮಹದೇವು, ಜಯರಾಂ, ಸಣ್ಣ ನೀರಾವರಿ ಇಲಾಖೆ ಇಇ ಇಮ್ರಾನ್ ಖಾನ್, ಎಇಇ ಈಶ್ವರ್, ಎಇ ಕಿರಣ್ ಮತ್ತಿತರರು ಇದ್ದರು.








