ನವದೆಹಲಿ:ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಯುವತಿ ಟ್ವಿಶಾ ಶರ್ಮಾ ಅವರ ವರದಕ್ಷಿಣೆ ಕಿರುಕುಳ ಮತ್ತು ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI) ಕೈಗೆತ್ತಿಕೊಂಡಿರುವ ಬೆನ್ನಲ್ಲೇ, ತನಿಖೆಯ ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಉಭಯ ಪಕ್ಷಗಳ (ಸಂತ್ರಸ್ತೆ ಮತ್ತು ಆರೋಪಿ) ಕುಟುಂಬಸ್ಥರು ಮಾಧ್ಯಮಗಳಿಗೆ ಯಾವುದೇ ರೀತಿಯ ಇಂಟರ್‌ವ್ಯೂ ಅಥವಾ ಹೇಳಿಕೆಗಳನ್ನು ನೀಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಮಾಧ್ಯಮಗಳ ಸರಣಿ ಚರ್ಚೆಗಳು ತನಿಖೆಯ ದಿಕ್ಕನ್ನು ತಪ್ಪಿಸಬಾರದು ಎಂದು ಆತಂಕ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಪ್ರಕರಣದ ಸೂಕ್ಷ್ಮತೆಯನ್ನು ಎತ್ತಿಹಿಡಿದು ಈ ಕೆಳಗಿನ ಪ್ರಮುಖ ನಿರ್ದೇಶನಗಳನ್ನು ನೀಡಿದೆ:
ಮಾಧ್ಯಮ ಸಂದರ್ಶನಗಳಿಗೆ ನಿಷೇಧ: ತನಿಖೆ ಪ್ರಗತಿಯಲ್ಲಿರುವಾಗ ಉಭಯ ಕುಟುಂಬಗಳ ಸದಸ್ಯರು ಮಾಧ್ಯಮಗಳ ಮುಂದೆ ಹೋಗಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು.
ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ನೀಡುವ ಹೇಳಿಕೆಗಳು ಸಿಬಿಐ ನಡೆಸುತ್ತಿರುವ ಸ್ವತಂತ್ರ ಮತ್ತು ಮುಕ್ತ ತನಿಖೆಯ ಮೇಲೆ ಪ್ರಭಾವ ಬೀರುವ ಅಥವಾ ಅಡ್ಡಿಪಡಿಸುವ ಸಾಧ್ಯತೆ ಇರುತ್ತದೆ.ಪ್ರಕರಣಕ್ಕೆ ಸಂಬಂಧಿಸಿದ ಸೂಕ್ಷ್ಮ ಸಾಕ್ಷ್ಯಾಧಾರಗಳು ಮತ್ತು ತನಿಖಾ ವಿವರಗಳ ಗೌಪ್ಯತೆಯನ್ನು ಕಾಪಾಡುವುದು ಸಿಬಿಐ ಮತ್ತು ನೊಂದ ಕುಟುಂಬಗಳ ಜವಾಬ್ದಾರಿಯಾಗಿದೆ.








