ಬೆಂಗಳೂರು:ಪತಿಯ ವೃತ್ತಿಜೀವನ ಹಾಗೂ ಸಮಾಜದಲ್ಲಿ ಆತನಿಗಿರುವ ಗೌರವಕ್ಕೆ ಕಳಂಕ ತರಬೇಕೆಂಬ ಉದ್ದೇಶದಿಂದ ಆತನ ಮೇಲಧಿಕಾರಿಗಳಿಗೆ ಸುಳ್ಳು ದೂರು ನೀಡುವುದು ಮತ್ತು ಇಲ್ಲಸಲ್ಲದ ಆರೋಪಗಳ ಪತ್ರ ಬರೆಯುವುದು ಕೇವಲ ಜಗಳವಲ್ಲ, ಅದು ಕಟು ‘ಮಾನಸಿಕ ಕ್ರೌರ್ಯ’ ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ಪ್ರಕಟಿಸಿದೆ.
ಭಾರತೀಯ ಸೇನೆಯಲ್ಲಿ ದೇಶ ಕಾಯುವ ಸೈನಿಕನೊಬ್ಬನಿಗೆ ಫ್ಯಾಮಿಲಿ ಕೋರ್ಟ್ ನೀಡಿದ್ದ ವಿಚ್ಛೇದನವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಇದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಹಾಗೂ ಕೆ. ರಾಜೇಶ್ ರೈ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಸುಪ್ರೀಂಕೋರ್ಟ್‌ನ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿ ಈ ಐತಿಹಾಸಿಕ ಆದೇಶ ನೀಡಿದೆ.
ನ್ಯಾಯಾಲಯದ ಪ್ರಕಾರ, ಪತ್ನಿಯ ನಿರಂತರ ಸುಳ್ಳು ಆರೋಪಗಳು ಮತ್ತು ಆಕೆಯ ನಡವಳಿಕೆಯಿಂದಾಗಿ ಪತಿಯು ತೀವ್ರ ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯ ಈ ಹಿಂದೆ ನೀಡಿದ್ದ ವಿಚ್ಛೇದನದ ತೀರ್ಪು ಸಂಪೂರ್ಣ ನ್ಯಾಯಸಮ್ಮತವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ದಂಪತಿಗೆ 2008ರಲ್ಲಿ ಕೊಡಗಿನಲ್ಲಿ ಮದುವೆಯಾಗಿದ್ದು, ಇವರಿಗೊಬ್ಬ ಗಂಡು ಮಗನಿದ್ದಾನೆ. ಆದರೆ, 2013ರಿಂದಲೇ ಇಬ್ಬರ ನಡುವೆ ಯಾವುದೇ ದಾಂಪತ್ಯ ಬಾಂಧವ್ಯವಿಲ್ಲದೆ ಸಂಪೂರ್ಣ ದೂರವಾಗಿದ್ದಾರೆ. ಯಾಲಯದಲ್ಲಿ ನಡೆದ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ (ಪರಸ್ಪರ ವಿಚಾರಣೆ) ಪತ್ನಿಯು ತನಗೆ ಪತಿಯೊಂದಿಗೆ ಮತ್ತೆ ಬಾಳುವೆ ಮಾಡುವ ಯಾವುದೇ ಇಚ್ಛೆಯನ್ನು ವ್ಯಕ್ತಪಡಿಸಿಲ್ಲ.ಪತಿ ಹೊಸದಾಗಿ ಕಟ್ಟಿಸಿರುವ ಮನೆಯ ಒಂದು ಭಾಗದಲ್ಲಿ ತನಗೆ ಆಶ್ರಯ ಬೇಕು ಮತ್ತು ಮಾಸಿಕ ಜೀವನಾಂಶವನ್ನು ಹೆಚ್ಚಿಸಬೇಕು ಎಂದು ಮಾತ್ರ ಪತ್ನಿ ಬೇಡಿಕೆಯಿಟ್ಟಿದ್ದರು. ಇದನ್ನು ಗಮನಿಸಿದ ಕೋರ್ಟ್, ಇಬ್ಬರ ನಡುವಿನ ವೈವಾಹಿಕ ಸಂಬಂಧ ಈಗಾಗಲೇ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಅಭಿಪ್ರಾಯಪಟ್ಟಿದೆ.
ಪತಿ ಆರ್ಮಿಯಲ್ಲಿ ದೇಶ ಸೇವೆ ಮಾಡುತ್ತಿದ್ದ ಕಾರಣ, ಪತ್ನಿ ಯಾವುದೇ ಬಲವಾದ ಕಾರಣವಿಲ್ಲದೆ ಪದೇಪದೇ ಗಂಡನ ಮನೆ ಬಿಟ್ಟು ತವರಿಗೆ ಓಡಿ ಹೋಗುತ್ತಿದ್ದಳು. ಅಷ್ಟಕ್ಕೇ ನಿಲ್ಲದೆ, ಮಹಿಳಾ ಸಾಂತ್ವನ ಕೇಂದ್ರಗಳು ಹಾಗೂ ಪತಿಯ ಮಿಲಿಟರಿ ಮೇಲಧಿಕಾರಿಗಳಿಗೆ ಸರಣಿ ಸುಳ್ಳು ದೂರುಗಳನ್ನು ನೀಡಿ ಕಾಟ ಕೊಟ್ಟಿದ್ದಳು.ಪತ್ನಿಯ ಈ ನಡೆಯು ನನ್ನ ಸೇನಾ ವೃತ್ತಿಜೀವನ ಮತ್ತು ಇಷ್ಟು ವರ್ಷ ಸಂಪಾದಿಸಿದ ಗೌರವಕ್ಕೆ ತೀವ್ರ ಧಕ್ಕೆ ತಂದಿದೆ” ಎಂದು ನೊಂದ ಪತಿ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಡಿವೋರ್ಸ್ ಮಂಜೂರು ಮಾಡಿತ್ತು. ಈ ಆದೇಶದ ವಿರುದ್ಧ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರೂ ಅಲ್ಲಿಯೂ ಆಕೆಗೆ ಮುಖಭಂಗವಾಗಿದೆ.








