ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (CBSE) ಫಲಿತಾಂಶದ ನಂತರದ ಮರುಪರಿಶೀಲನಾ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದವು ಈಗ ಗಂಭೀರ ತಿರುವು ಪಡೆದುಕೊಂಡಿದೆ. ಮರುಮೌಲ್ಯಮಾಪನ ಪ್ರಕ್ರಿಯೆಯ ಸಮಯದಲ್ಲಿ ಮಂಡಳಿಯು ಅಪ್ಲೋಡ್ ಮಾಡಿದ ಕೆಮಿಸ್ಟ್ರಿ (ರಸಾಯನಶಾಸ್ತ್ರ) ವಿಷಯದ ಉತ್ತರ ಪತ್ರಿಕೆ ತನ್ನದಲ್ಲ ಎಂದು 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ.
ದೇಶಾದ್ಯಂತ ಈಗಾಗಲೇ ಹಲವು ವಿದ್ಯಾರ್ಥಿಗಳು ಸಿಬಿಎಸ್ಇಯ ಫಲಿತಾಂಶದ ನಂತರದ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳ (ಪೋರ್ಟಲ್ ಕ್ರ್ಯಾಶ್ ಆಗುವುದು, ಪೇಮೆಂಟ್ ವಿಫಲವಾಗುವುದು ಮತ್ತು ಉತ್ತರ ಪತ್ರಿಕೆಗಳ ಮಸುಕಾದ ಸ್ಕ್ಯಾನ್ ಪ್ರತಿಗಳು) ಬಗ್ಗೆ ದೂರುತ್ತಿರುವ ಸಮಯದಲ್ಲೇ ಈ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಈ ಇತ್ತೀಚಿನ ಪ್ರಕರಣವು, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಂಡಳಿಯು ಉತ್ತರ ಪತ್ರಿಕೆಗಳನ್ನು ಸರಿಯಾಗಿ ಮ್ಯಾಪ್ ಮಾಡುತ್ತಿದೆಯೇ ಮತ್ತು ಡಿಜಿಟಲೀಕರಣಗೊಳಿಸುತ್ತಿದೆಯೇ ಎಂಬ ಬಗ್ಗೆ ಆಳವಾದ ಕಳಕಳಿಯನ್ನು ಮೂಡಿಸಿದೆ.
’ದಿ ಫ್ರೀ ಪ್ರೆಸ್ ಜರ್ನಲ್’ ಜೊತೆ ಮಾತನಾಡಿದ ಸಂಜನಾ ಎಂದು ಗುರುತಿಸಲಾದ ವಿದ್ಯಾರ್ಥಿನಿ, ತನ್ನ ಕೆಮಿಸ್ಟ್ರಿ ಅಂಕಗಳು ನಿರೀಕ್ಷೆಗಿಂತ ತೀರಾ ಕಡಿಮೆ ಬಂದಿದ್ದರಿಂದ, ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿದ್ದಾಳೆ. ಆಕೆಯ ಪ್ರಕಾರ, ಪೋರ್ಟಲ್ ಪದೇ ಪದೇ ಲೋಡ್ ಆಗದ ಕಾರಣ ಈ ಪ್ರಕ್ರಿಯೆಯು ತುಂಬಾ ಕಷ್ಟಕರವಾಗಿತ್ತು.
”ಪೋರ್ಟಲ್ ಸ್ವಲ್ಪ ಸಮಯದವರೆಗೆ ಲೋಡ್ ಆಗುತ್ತಿರಲಿಲ್ಲ. ನಾನು ಹಲವು ಬಾರಿ ಪ್ರಯತ್ನಿಸಬೇಕಾಯಿತು. ಆದರೆ ಕೊನೆಗೂ ಅದು ಓಪನ್ ಆದಾಗ, ಕೇವಲ ಮೊದಲ ಪುಟ ಅಂದರೆ ನನ್ನ ವಿವರಗಳು ಮತ್ತು ನನ್ನ ಕೈಬರಹವನ್ನು ಹೊಂದಿದ್ದ ಪುಟ ಮಾತ್ರ ನನ್ನದಾಗಿತ್ತು ಎಂಬುದನ್ನು ನಾನು ಗಮನಿಸಿದೆ,” ಎಂದು ಅವಳು ಹೇಳಿದ್ದಾಳೆ.
ಉಳಿದ ಪುಟಗಳು ಸಂಪೂರ್ಣವಾಗಿ ಭಿನ್ನವಾಗಿದ್ದವು ಎಂದು ಅವಳು ಆರೋಪಿಸಿದ್ದಾಳೆ. “ಒಳಗಿನ ಯಾವುದೇ ಉತ್ತರದ ಪುಟಗಳು ನನ್ನದಾಗಿರಲಿಲ್ಲ. ಅದು ನನ್ನ ಕೈಬರಹವೇ ಆಗಿರಲಿಲ್ಲ,” ಎಂದು ಆಕೆ ಹೇಳಿಕೊಂಡಿದ್ದಾಳೆ.
ಅಪ್ಲೋಡ್ ಮಾಡಲಾದ ಉತ್ತರದ ಬುಕ್ಲೆಟ್ ತಪ್ಪು ಎಂದು ತಾನು ನಂಬಿರುವುದರಿಂದ, ಕೆಮಿಸ್ಟ್ರಿ ವಿಷಯದ ಮುಂದಿನ ಮರುಮೌಲ್ಯಮಾಪನ ಪ್ರಕ್ರಿಯೆಗೆ ತಾನು ಮುಂದಾಗಿಲ್ಲ ಎಂದು ಸಂಜನಾ ತಿಳಿಸಿದ್ದಾಳೆ. “ಈ ತಪ್ಪು ಉತ್ತರ ಪತ್ರಿಕೆಯನ್ನು ಇಟ್ಟುಕೊಂಡು ನಾನು ಮರುಮೌಲ್ಯಮಾಪನಕ್ಕೆ ಹೋಗುತ್ತಿಲ್ಲ. ನನ್ನ ಅಸಲಿ ಉತ್ತರ ಪತ್ರಿಕೆಯನ್ನು ಪರಿಶೀಲಿಸಬೇಕೆಂದು ನಾನು ಬಯಸುತ್ತೇನೆ,” ಎಂದು ಅವಳು ಹೇಳಿದ್ದಾಳೆ.
ಸಿಬಿಎಸ್ಇಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದ ಕುಟುಂಬ
ಸಂಜನಾ ಅವರ ಹಿರಿಯ ಸಹೋದರ ಹರ್ಷ್ ಕೂಡ ಈ ಬಗ್ಗೆ ಮಾತನಾಡಿದ್ದು, ಈ ತಪ್ಪು ಪತ್ತೆಯಾದ ತಕ್ಷಣ ಕುಟುಂಬದವರು ಮಂಡಳಿಗೆ ಇಮೇಲ್ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ. “ಮೊದಲ ಪುಟ ಆಕೆಗೆ ಸೇರಿದ್ದು, ಆದರೆ ಉಳಿದ ಪುಟಗಳು ಆಕೆಗೆ ಸೇರಿದ್ದೇ ಅಲ್ಲ. ಕೈಬರಹ ಕೂಡ ಸಂಪೂರ್ಣವಾಗಿ ಬೇರೆಯಾಗಿದೆ,” ಎಂದು ಅವರು ಹೇಳಿದರು.
ಅವರ ಪ್ರಕಾರ, ಕುಟುಂಬದವರು ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾದ ಸಹಾಯವಾಣಿ ಸಂಖ್ಯೆಗಳ ಮೂಲಕ ಸಿಬಿಎಸ್ಇಯನ್ನು ಸಂಪರ್ಕಿಸಲು ಪ್ರಯತ್ನಿಸಿದರಾದರೂ ಸಂಪರ್ಕ ಸಾಧ್ಯವಾಗಲಿಲ್ಲ. “ಸಿಬಿಎಸ್ಇ ಒದಗಿಸಿದ ಟೋಲ್-ಫ್ರೀ ಸಂಖ್ಯೆ ಇದೆ, ಆದರೆ ಅದು ಸದಾ ಬ್ಯುಸಿ ಬರುತ್ತಿತ್ತು. ಇತರ ಸಂಖ್ಯೆಗಳು ನಿಷ್ಕ್ರಿಯವಾಗಿದ್ದವು ಅಥವಾ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ,” ಎಂದು ಅವರು ಆರೋಪಿಸಿದ್ದಾರೆ.








