ನಾರಾಯಣಖೇಡ್: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಂಗಾರೆಡ್ಡಿ ಜಿಲ್ಲೆಯ ಮನ್ಸೂರ್ ಮಂಡಲದ ಎಲ್ಗೋಯಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಭಾರೀ ಸಂಚಲನ ಮೂಡಿಸಿದೆ.
ಘಟನೆಯ ವಿವರ:
ನಾರಾಯಣಖೇಡ್ ಮಂಡಲದ ಗಂಗಾಪುರ ಗ್ರಾಮದ ನಿವಾಸಿ ಚೆಂಬನುಳ್ಳ ಮುತ್ಯಂ ರೆಡ್ಡಿ (35) ಕೊಲೆಯಾದ ದುರ್ದೈವಿ. ಈತ ಬೋರ್ವೆಲ್ ಮೋಟಾರ್ ರಿಪೇರಿ ಕೆಲಸ ಮಾಡಿಕೊಂಡಿದ್ದನು. ಇವನ ಪತ್ನಿ ಕಲ್ಪನಾ ನಾರಾಯಣಖೇಡ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಸಮಯದಲ್ಲಿ ಮನ್ಸೂರ್ ಮಂಡಲದ ಎಲ್ಗೋಯಿ ಗ್ರಾಮದ ಗೌನಿ ಪಂಡರಿ ಎಂಬಾತ ಆರ್ಟಿಸಿ (RTC) ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದನು.
ಕೆಲಸದ ನಡುವೆ ಕಲ್ಪನಾ ಹಾಗೂ ಪಂಡರಿ ಮಧ್ಯೆ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಇವರ ಅಕ್ರಮ ಸಂಬಂಧಕ್ಕೆ ಮುತ್ಯಂ ರೆಡ್ಡಿ ಅಡ್ಡಿಯಾಗುತ್ತಿದ್ದನು. ಇದರಿಂದ ಆತನನ್ನು ಮುಗಿಸಲು ಇಬ್ಬರೂ ಸೇರಿ ಸ್ಕೆಚ್ ಹಾಕಿದ್ದಾರೆ.
ಪ್ಲಾನ್ ಮಾಡಿ ಕೊಲೆ:
ಒಂಬತ್ತು ದಿನಗಳ ಹಿಂದೆ ಮುತ್ಯಂ ರೆಡ್ಡಿಯನ್ನು ನಾರಾಯಣಖೇಡ್-ರಾಯ್ಪಲ್ಲಿ ರಸ್ತೆಯಲ್ಲಿರುವ ದಾಬಾಕ್ಕೆ ಕರೆದೊಯ್ದು ಮದ್ಯ ಕುಡಿಸಿ, ಊಟ ಮಾಡಿಸಿದ್ದಾರೆ. ಬಳಿಕ ಎಲ್ಗೋಯಿ ಗ್ರಾಮದ ಹೊರವಲಯದ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಯಾರಿಗೂ ಅನುಮಾನ ಬಾರದಿರಲು “ತಾತನ ಸಮಾಧಿ ನಿರ್ಮಾಣಕ್ಕಾಗಿ” ಎಂದು ಮುಂಚಿತವಾಗಿಯೇ ಜೆಸಿಬಿ (JCB) ಮೂಲಕ ಗುಂಡಿ ತೋಡಿಸಿದ್ದರು. ಹತ್ಯೆಯ ನಂತರ ಅದೇ ಗುಂಡಿಯಲ್ಲಿ ಶವವನ್ನು ಹೂತುಹಾಕಿದ್ದಾರೆ.
ಬಯಲಿಗೆಳೆದ ಪೊಲೀಸರು:
ಮುತ್ಯಂ ರೆಡ್ಡಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಾಗ, ಕಲ್ಪನಾಳ ಫೋನ್ ಕಾಲ್ ಡೇಟಾದಲ್ಲಿ ಅನುಮಾನಾಸ್ಪದ ವಿವರಗಳು ಲಭ್ಯವಾಗಿವೆ. ಇದರ ಆಧಾರದ ಮೇಲೆ ಪೊಲೀಸರು ಪಂಡರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಲ್ಲದೆ, ಶವ ಹೂತಿಟ್ಟ ಸ್ಥಳವನ್ನು ತೋರಿಸಿದ್ದಾನೆ.
ಕುಟುಂಬದಲ್ಲಿ ಕಣ್ಣೀರು:
ಮೃತ ಮುತ್ಯಂ ರೆಡ್ಡಿಗೆ ಐದು ವರ್ಷದ ಹೆಣ್ಣು ಮಗಳಿದ್ದಾಳೆ. ಹೆಂಡತಿಯೇ ಗಂಡನನ್ನು ಕೊಂದಿರುವ ವಿಷಯ ತಿಳಿದು ಮೃತನ ಪೋಷಕರು ಕಣ್ಣೀರು ಮುನ್ನೀರಾಗಿದ್ದಾರೆ. ಘಟನಾ ಸ್ಥಳಕ್ಕೆ ಡಿಎಸ್ಪಿ ವೆಂಕಟ್ ರೆಡ್ಡಿ, ಸಿಐ ಶ್ರೀನಿವಾಸ್ ರೆಡ್ಡಿ, ಎಸ್ಐ ಕೋಟೇಶ್ವರರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.








