ನವದೆಹಲಿ:ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಹಾಗೂ ಶತಮಾನದ ಇತಿಹಾಸವಿರುವ ‘ಡೆಲ್ಲಿ ಜಿಮ್ಖಾನಾ ಕ್ಲಬ್’ (Delhi Gymkhana Club) ಆವರಣವನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ನೀಡಿರುವ ಆದೇಶದ ವಿರುದ್ಧ ಕ್ಲಬ್ನ ಸದಸ್ಯರು ಈಗ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ಕೇಂದ್ರ ಭೂಮಿ ಮತ್ತು ಅಭಿವೃದ್ಧಿ ಕಚೇರಿ (L&DO) ನೀಡಿರುವ ಈ ಆದೇಶವನ್ನು ಪ್ರಶ್ನಿಸಿ ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸದಸ್ಯರು ತೀರ್ಮಾನಿಸಿದ್ದಾರೆ.
ಕ್ಲಬ್ನ ಲೀಸ್ (ಗುತ್ತಿಗೆ) ನಿಯಮಗಳ ಉಲ್ಲಂಘನೆ ಹಾಗೂ ಭೂಮಿಯ ದುರುಪಯೋಗದ ಆರೋಪದ ಮೇಲೆ ಕೇಂದ್ರ ಸರ್ಕಾರವು ಜಿಮ್ಖಾನಾ ಕ್ಲಬ್ಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿ, ಜಾಗವನ್ನು ವಾಪಸ್ ಪಡೆಯಲು ನೋಟಿಸ್ ಜಾರಿ ಮಾಡಿತ್ತು.
ಕೇಂದ್ರದ ಆದೇಶ ಹೊರಬಿದ್ದ ಬೆನ್ನಲ್ಲೇ ಜಿಮ್ಖಾನಾ ಕ್ಲಬ್ನ ಸದಸ್ಯರು ತುರ್ತು ಸಾಮಾನ್ಯ ಸಭೆ (EGM) ನಡೆಸಿದ್ದು, ಸರ್ಕಾರದ ಏಕಪಕ್ಷೀಯ ತೀರ್ಮಾನದ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ (Stay Order) ತರಲು ಸರ್ವಾನುಮತದ ನಿರ್ಧಾರ ಕೈಗೊಂಡಿದ್ದಾರೆ.
ನಿಯಮ ಉಲ್ಲಂಘನೆ ಆರೋಪ ತಳ್ಳಿಹಾಕಿದ ಸದಸ್ಯರು: “ನಾವು ಯಾವುದೇ ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿಲ್ಲ. ಕ್ಲಬ್ನ ಆಡಳಿತದಲ್ಲಿ ಕೆಲವು ತಾಂತ್ರಿಕ ಲೋಪಗಳ ನೆಪವೊಡ್ಡಿ ಇಡೀ ಐತಿಹಾಸಿಕ ಸಂಸ್ಥೆಯನ್ನೇ ಮುಚ್ಚಿಸಲು ಹೊರಟಿರುವುದು ಕಾನೂನುಬಾಹಿರ” ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣ್ಯರ ತಾಣ: ರಾಜಕಾರಣಿಗಳು, ನಿವೃತ್ತ ನ್ಯಾಯಾಧೀಶರು, ಹಿರಿಯ ಐಎಎಸ್-ಐಪಿಎಸ್ ಅಧಿಕಾರಿಗಳು ಹಾಗೂ ಉದ್ಯಮಿಗಳನ್ನೊಳಗೊಂಡ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಈ ಕ್ಲಬ್ನ ಸದಸ್ಯರಾಗಿದ್ದಾರೆ. ಹಾಗಾಗಿ ಈ ವಿವಾದ ರಾಷ್ಟ್ರಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ.








