ನವದೆಹಲಿ:ಭಾರತೀಯ ವಾಯುಪಡೆಯನ್ನು (IAF) ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಭಾರಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. 36 ರಫೇಲ್ ವಿಮಾನಗಳ ಯಶಸ್ವಿ ಖರೀದಿ ಬೆನ್ನಲ್ಲೇ, ಈಗ ಬರೋಬ್ಬರಿ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಅಂತಿಮ ಸಿದ್ಧತೆ ನಡೆಸಿದೆ. ಈ ಕುರಿತಾದ ಅಧಿಕೃತ ವಿನಂತಿ ಪತ್ರವನ್ನು (LOR – Letter of Request) ಭಾರತ ಸರ್ಕಾರವು ಶೀಘ್ರದಲ್ಲೇ ಫ್ರಾನ್ಸ್ ದೇಶಕ್ಕೆ ಕಳುಹಿಸಿಕೊಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
’ಮೇಕ್ ಇನ್ ಇಂಡಿಯಾ’ಗೆ ಆದ್ಯತೆ: ಒಟ್ಟು 114 ವಿಮಾನಗಳ ಪೈಕಿ ಆರಂಭಿಕ ಕೆಲವು ವಿಮಾನಗಳು ಫ್ರಾನ್ಸ್‌ನಿಂದ ನೇರವಾಗಿ ಹಾರಾಟಕ್ಕೆ ಸಿದ್ಧವಿರುವ ಸ್ಥಿತಿಯಲ್ಲಿ ಬರಲಿವೆ. ಆದರೆ, ಉಳಿದ ಬಹುಪಾಲು ವಿಮಾನಗಳನ್ನು ಭಾರತೀಯ ಸಂಸ್ಥೆಯೊಂದರ ಸಹಭಾಗಿತ್ವದೊಂದಿಗೆ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಭಾರತದಲ್ಲೇ ತಯಾರಿಸಲು ಯೋಜಿಸಲಾಗಿದೆ.
ಪ್ರಸ್ತುತ ಚೀನಾ ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ಮತ್ತು ವಾಯುಪಡೆಯಲ್ಲಿ ಕ್ಷೀಣಿಸುತ್ತಿರುವ ಯುದ್ಧ ವಿಮಾನಗಳ ಸ್ಕ್ವಾಡ್ರನ್ ಸಂಖ್ಯೆಯನ್ನು ಹೆಚ್ಚಿಸಲು ಈ ಒಪ್ಪಂದ ಅತ್ಯಂತ ನಿರ್ಣಾಯಕವಾಗಿದೆ.
ಇದು ಇತ್ತೀಚಿನ ವರ್ಷಗಳಲ್ಲೇ ಭಾರತ ರಕ್ಷಣಾ ವಲಯದಲ್ಲಿ ಕೈಗೊಳ್ಳುತ್ತಿರುವ ಅತಿ ದೊಡ್ಡ ರಕ್ಷಣಾ ಒಪ್ಪಂದಗಳಲ್ಲಿ ಒಂದಾಗಲಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಈಗಾಗಲೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿರುವ ರಫೇಲ್ ವಿಮಾನಗಳು ತನ್ನ ಅತ್ಯಾಧುನಿಕ ರೇಡಾರ್ ವ್ಯವಸ್ಥೆ, ದೀರ್ಘ ವ್ಯಾಪ್ತಿಯ ಕ್ಷಿಪಣಿ ಸಾಮರ್ಥ್ಯ ಮತ್ತು ಆಕಾಶದಲ್ಲೇ ಇಂಧನ ತುಂಬಿಸುವ ತಂತ್ರಜ್ಞಾನದಿಂದಾಗಿ ಅತ್ಯಂತ ಯಶಸ್ವಿ ಹಾಗೂ ವಿಶ್ವಾಸಾರ್ಹ ಯುದ್ಧ ವಿಮಾನ ಎಂದು ಸಾಬೀತಾಗಿವೆ.








