ಬೆಂಗಳೂರು: ಆನೇಕಲ್ ಸಮೀಪ ಕರ್ನಾಟಕ ಗೃಹ ಮಂಡಳಿ ಮೂಲಕ ರೈತರ ಫಲವತ್ತಾದ ಜಮೀನು ಪಡೆದು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವುದು ಸರಿಯಲ್ಲ. ಗೃಹ ಮಂಡಳಿ ಮನೆಗಳನ್ನು ನಿರ್ಮಿಸಬೇಕೇ ಹೊರತು ಸ್ಟೇಡಿಯಂ ಹೇಗೆ ನಿರ್ಮಿಸುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಮಾನ್ಯ ಜನರಿಗೆ ಮನೆ ನಿರ್ಮಿಸುವ ಕೆಲಸವನ್ನು ಗೃಹ ಮಂಡಳಿ ಮಾಡುತ್ತಿತ್ತು. ಇದೀಗ ಹೇಗೆ ಸ್ಟೇಡಿಯಂ ನಿರ್ಮಿಸುತ್ತದೆ. ಸ್ಟೇಡಿಯಂ ಅನ್ನು ಬೇಕಾದರೆ ಸರ್ಕಾರ ಮಾಡಲಿ ಎಂದು ಹೇಳಿದರು.
ರೈತರಿಂದ ಬೆಲೆಬಾಳುವ ಜಮೀನನ್ನು ಗೃಹ ಮಂಡಳಿ ಮನೆ ನಿರ್ಮಿಸಲು ಪಡೆದಿದೆ. ಗಡಿ ಭಾಗದ ಆನೇಕಲ್‍ಗೆ ಈಗಲೇ ಹೋಗಿಬರುವುದು ಕಷ್ಟದ ಸ್ಥಿತಿಯಲ್ಲಿದೆ. ಯಾಕೆಂದರೆ ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಇದೆ. ಇನ್ನು ಸ್ಟೇಡಿಯಂ ಆದರೆ ಈ ಟ್ರಾಫಿಕ್ ತೊಂದರೆ ಊಹಿ¸ಲೂ ಸಾಧ್ಯವಿಲ್ಲ. ಆನೇಕಲ್ ಸಮೀಪ ಸ್ಟೇಡಿಯಂ ಬದಲು ತುಮಕೂರು ರಸ್ತೆಯಲ್ಲಿ ನಿರ್ಮಿಸಿದ್ದರೆ ಒಳ್ಳೆಯದಿತ್ತು ಎಂದು ಸಲಹೆ ನೀಡಿದರು.
ಬೆಂಗಳೂರು ನಗರವನ್ನು ವರ್ಟಿಕಲ್ ಆಗಿ ಆಗಿ ಬೆಳೆಸುವುದು ಆಘಾತಕಾರಿಯಾದುದು. ತಮಿಳುನಾಡಿನ ಕಡೆಗೆ ಹೋಗುವ ಬದಲು ಉತ್ತರ ಕರ್ನಾಟಕದ ಕಡೆ ಹೋಗಿದ್ದರೆ ಆ ಭಾಗದ ಜನರಿಗೆ ಒಳ್ಳೆಯದಾಗುತ್ತಿತ್ತು. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರವನ್ನು ಬೆಂಗಳೂರಿಗೆ ಸೇರಿಸುವ ಬದಲು ಇಡೀ ಕರ್ನಾಟಕವನ್ನೇ ಬೆಂಗಳೂರು ಎಂದು ನಾಮಕರಣ ಮಾಡಿದರೆ ಒಳ್ಳೆಯದು ಎಂದು ಹೇಳಿದರು.
ಸ್ಟೇಡಿಯಂ ನೆಪದಲ್ಲಿ ಲೂಟ ಮಾಡುವ ಕೆಲಸ ನಡೆದಿದೆ. ಸ್ಟೇಡಿಯಂ ನಿರ್ಮಿಸುವುದಕ್ಕೆ ಪ್ರಕೃತಿಯೇ ಮುನಿದಿದೆ. ಸ್ಟೇಡಿಯಂ ಜಾಗ ಅನೆ ಕಾರಿಡಾರ್ ವ್ಯಾಪ್ತಿಯಲ್ಲಿದೆ ಎಂದು ಅರಣ್ಯ ಸಚಿವರೇ ಹೇಳಿದ್ದಾರೆ. ಜನಸಂದಣಿ ಹೆಚ್ಚಿದರೆ ಪ್ರಾಣಿಗಳಿಗೆ ತೊಂದರೆಯಾಗಲಿದೆ. ಈಗ ಸ್ಟೇಡಿಯಂಗಳಲ್ಲಿ ಜನ ಕಾಳ್ತುಳಿತದಿಂದ ಸಾಯ್ತಾರೆ. ಇನ್ನು ಮುಂದೆ ಆನೆ ತುಳಿದು ಸಾಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ತೀರ್ಮಾನವನ್ನು ವರಿಷ್ಠರು ಮಾಡುತ್ತಾರೆ. ಕೋರ್ ಕಮಿಟಿಯಲ್ಲಿ ಚರ್ಚೆ ಆಗಿದೆ. ದೇವೇಗೌಡರನ್ನು ರಾಜ್ಯಸಭೆಗೆ ಕಳಿಸುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ದೇವೇಗೌಡರ ಬಗ್ಗೆ ಬಿಜೆಪಿಗೆ ಗೌರವ ಇದೆ. ಅವರು ಎನ್‍ಡಿಎ ಭಾಗವೇ ಹೊರತು ಬಿಜೆಪಿ ಭಾಗ ಅಲ್ಲ ಎಂದು ಸ್ಪಷ್ಟಪಡಿಸಿದರು.
ಶೇ.60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ
ಬೆಳಗಾವಿಯ ಮನೆಯಲ್ಲಿ ಗುಂಡು ಹಾರಿಸಿಕೊಂಡು KLE ಆಸ್ಪತ್ರೆ ವೈದ್ಯ ದಿನೇಶ್ ಭಟ್ಕಳ್ ಆತ್ಮಹತ್ಯೆ








