ಕೋಲಾರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸಾಲು ಸಾಲು ಅನಾಹುತಗಳು ಸಂಭವಿಸಿವೆ. ಕೋಲಾರ ಜಿಲ್ಲೆಯಲ್ಲಿ ಗಾಳಿಯ ರಭಸಕ್ಕೆ ಮನೆಯೊಂದರ ಮೇಲ್ಛಾವಣಿ ಹಾರಿಹೋಗಿ, ಸಿಮೆಂಟ್ ಇಟ್ಟಿಗೆ ತಲೆಯ ಮೇಲೆ ಬಿದ್ದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹಾಸಂಡಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ನಾರಾಯಣಪ್ಪ ಮೃತಪಟ್ಟ ದುರ್ದೈವಿ ರೈತರಾಗಿದ್ದಾರೆ.
ಮಳೆಯಿಂದ ರಕ್ಷಿಸಿಕೊಳ್ಳಲು ಹೋಗಿ ಕಳೆದುಕೊಂಡ ಜೀವ
ಮೃತ ನಾರಾಯಣಪ್ಪ ಅವರು ಎಂದಿನಂತೆ ತೋಟದ ಕಡೆ ಕುರಿ ಮೇಯಿಸಲು ಹೋಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಭಾರಿ ಬಿರುಗಾಳಿ ಸಹಿತ ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಅವರು ಸಮೀಪದಲ್ಲಿದ್ದ ಮನೆಯೊಂದರ ಬಳಿ ಆಶ್ರಯ ಪಡೆದು ನಿಂತಿದ್ದರು.
ತಲೆಗೆ ಬಿದ್ದ ಸಿಮೆಂಟ್ ಇಟ್ಟಿಗೆ
ಆದರೆ, ಗಾಳಿಯ ವೇಗ ಅತಿಯಾಗಿದ್ದರಿಂದ ಆಶ್ರಯ ಪಡೆದಿದ್ದ ಮನೆಯ ಮೇಲ್ಛಾವಣಿ (ಶೀಟ್) ರಭಸಕ್ಕೆ ಹಾರಿಹೋಗಿದೆ. ಈ ವೇಳೆ ಶೀಟ್ ಹಿಡಿದಿಟ್ಟುಕೊಳ್ಳಲು ಇಟ್ಟಿದ್ದ ಸಿಮೆಂಟ್ ಇಟ್ಟಿಗೆಗಳು ನೇರವಾಗಿ ರೈತ ನಾರಾಯಣಪ್ಪ ಅವರ ತಲೆಯ ಮೇಲೆ ಬಿದ್ದಿವೆ. ಪರಿಣಾಮವಾಗಿ ತಲೆಗೆ ತೀವ್ರವಾದ ಗಂಭೀರ ಗಾಯಗಳಾಗಿ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಹಲವು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ರೈತನ ಹಠಾತ್ ಸಾವಿನಿಂದ ಹಾಸಂಡಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿಯ ಮನೆಯಲ್ಲಿ ಗುಂಡು ಹಾರಿಸಿಕೊಂಡು KLE ಆಸ್ಪತ್ರೆ ವೈದ್ಯ ದಿನೇಶ್ ಭಟ್ಕಳ್ ಆತ್ಮಹತ್ಯೆ








