ಶಿವಮೊಗ್ಗ ; ಜಿಲ್ಲೆಯ ಹೊಳೆಹೊನ್ನೂರು ವ್ಯಾಪ್ತಿಯ ಮತ್ತು ಇತರೆ ಕೆಲವೆಡೆ ಇತ್ತೀಚೆಗೆ ಬಿರುಗಾಳಿ ಮತ್ತು ಮಳೆಯಿಂದಾಗಿ ಅನೇಕ ರೈತರ ಅಡಿಕೆ ಮರಗಳು ಧರೆಗುರುಳಿ ಸಂಭವಿಸಿದ ಹಾನಿಗೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಶುಕ್ರವಾರದಂದು ಜಿ.ಪಂ. ಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಮಾತನಾಡಿ, ಮಳೆಗಾಳಿ ಹಾನಿಗೆ ಎಕರೆಗೆ ರೂ. 9000 ನಿಗದಿಯಿಂದ ರೈತರಿಗೆ ಏನೂ ಉಪಯೋಗವಿಲ್ಲ. ಅಡಿಕೆ ಮರಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದು, ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ, ಈ ಬೆಳೆ ನಷ್ಟಕ್ಕೆ ವಿಮೆ ಸೇರ್ಪಡೆಯಾಗುವುದಿಲ್ಲ. ಆದ್ದರಿಂದ ಸೇರ್ಪಡೆಗೊಳಿಸಲು ಸಹ ಕ್ರಮ ಕೈಗೊಳ್ಳಬೇಕೆಂದರು.
ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಮಾತನಾಡಿ, ಗಾಳಿಮಳೆ ಯಿಂದ ರೈತರಿಗೆ ಪರಿಹಾರ ನೀಡಲು ಪರಿಹಾರ ಪೋರ್ಟಲ್ ಲ್ಲಿ ವರದಿ ದಾಖಲಿಸಿದ್ದು ಇನ್ನು 15 ರಿಂದ 20 ದಿನಗಳಲ್ಲಿ ಪರಿಹಾರ ಮಂಜೂರಾಗಲಿದೆ ಎಂದರು.
ಸಚಿವರು ಪ್ರತಿಕ್ರಿಯಿಸಿ, ಅಡಿಕೆ ಬೆಳೆ ಹಾನಿ ಕುರಿತು ಈಗಾಗಲೇ ಮೌಲ್ಯ ಮಾಪನ ಮಾಡಲಾಗಿದೆ. ಈ ಹಾನಿ ವಿಷಯ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕಿದೆ. ನಾನು ಮತ್ತು ಸಾಗರ ಶಾಸಕರು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಮನವಿ ಮಾಡಿದ್ದೇವೆ ಎಂದ ಅವರು ಕೇಂದ್ರ ಸರ್ಕಾರವೂ ಈ ಕುರಿತು ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸೋಣವೆಂದರು.
ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ,ಮಲೆನಾಡು ಭಾಗದಲ್ಲಿ ಎಲೆಚುಕ್ಕಿ ರೋಗದಿಂದಾಗಿ ಸುಮಾರು ೪೦ ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದ ರೈತರು ೪-೫ ಕ್ವಿಂಟಾಲ್ ಬೆಳೆಯುವಂತಾಗಿದೆ. ಆದ್ದರಿಂದ ಎಲೆಚುಕ್ಕಿ ರೋಗ ನಿರ್ಮೂಲನೆಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಸಚಿವರು ಪ್ರತಿಕ್ರಿಯಿಸಿ, ಎಲೆಚುಕ್ಕಿ ರೋಗ ನಿಯಂತ್ರಣ, ನಿರ್ಮೂಲನೆಗೆ ಸಂಶೋಧನೆಗಳು ನಡೆಯುತ್ತಿದ್ದು ಮುಂಬರುವ ವರ್ಷ ಎಲೆಚುಕ್ಕಿ ರೋಗಕ್ಕೆ ಔಷಧಿ ಬರಲಿದೆ ಎಂಬ ವಿಶ್ವಾಸ ಇದೆ ಎಂದರು.
ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು, ರಾಜ್ಯ ಸರ್ಕಾರ ಎಲೆಚುಕ್ಕಿ ರೋಗ ನಿಯಂತ್ರಣ ಕುರಿತು ಸಂಶೋಧನೆ, ಇತರೆ ಕ್ರಮಗಳ ಮೂಲಕ ಪ್ರಯತ್ನಿಸುತ್ತಿದ್ದು ಶೀಘ್ರದಲ್ಲೇ ಪರಿಹಾರೋಪಾಯಕ್ಕೆ ಸರ್ಕಾರ ಬದ್ದವಾಗಿದೆ ಎಂದರು.
ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಗೆಸ್ಟ್ ಶಿಕ್ಷಕರನ್ನು ನೇಮಕವಮಾಡಲು ಆದೇಶಿಸಲಾಗುತ್ತಿದೆ ಪಿಯು ಗೆ ನೆನ್ನೆ ಆದೇಶ ಆಗಿದ್ದು, ಎಸ್ ಎಸ್ ಎಲ್ ಸಿ ಗೆ ಇಂದೇ ಆದೇಶ ಆಗಲಿದೆ ಎಂದರು.
ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದಕ್ಕೆ ಶಾಲಾ ಶಿಕ್ಷಣ ಸಚಿವರಿಗೆ ಹಾಗೂ ಜಿ.ಪಂ ಸಿಇಓ ಅವರ ಕಾರ್ಯವೈಖರಿಗೆ ಶಾಸಕರು ಸಭೆಯಲ್ಕಿ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಎಂಎಡಿಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಓ ಹೇಮಂತ್ ಎನ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಎಸ್ ಪಿ ಕಾರಿಯಪ್ಪ, ಜಿ.ಪಂ ಉಪ ಕಾರ್ಯದರ್ಶಿಗಳು, ಸಿಪಿಓ, ಇತರೆ ಅಧಿಕಾರಿಗಳು ಹಾಜರಿದ್ದರು.
GOOD NEWS: ಜೂನ್.1ರಿಂದ ಬೀದರಿಗೆ, 10ರಿಂದ ಕಲಬುರ್ಗಿಗೆ ಬೆಂಗಳೂರಿನಿಂದ ವಿಮಾನ ಸೇವೆ ಪುನರಾರಂಭ
ಬೆಳಗಾವಿಯ ಮನೆಯಲ್ಲಿ ಗುಂಡು ಹಾರಿಸಿಕೊಂಡು KLE ಆಸ್ಪತ್ರೆ ವೈದ್ಯ ದಿನೇಶ್ ಭಟ್ಕಳ್ ಆತ್ಮಹತ್ಯೆ








