ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ.
ಗುರುವಾರ ದೆಹಲಿಯಿಂದ ಹೊರಟಿದ್ದ ಏರ್ ಇಂಡಿಯಾ ಸಂಸ್ಥೆಯ AI2651 ವಿಮಾನವು ಬೆಂಗಳೂರು ವಿಮಾನ ನಿಲ್ದಾಣದ ರನ್ವೇ ಸ್ಪರ್ಶಿಸುವ ಸಂದರ್ಭದಲ್ಲಿ, ಅದರ ಹಿಂಭಾಗ ನೆಲಕ್ಕೆ ಜೋರಾಗಿ ಉಜ್ಜಿದೆ (Tail Strike).
ಸುರಕ್ಷಿತ ಪ್ರಯಾಣಿಕರು:
ವಿಮಾನದ ಹಿಂಭಾಗ ನೆಲಕ್ಕೆ ತಗುಲಿದ ತಕ್ಷಣವೇ ಎಚ್ಚೆತ್ತ ಪೈಲಟ್ಗಳು ಸಮಯಪ್ರಜ್ಞೆ ಮೆರೆದು ವಿಮಾನವನ್ನು ಸುರಕ್ಷಿತವಾಗಿ ರನ್ವೇ ಮೇಲೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ವರ್ಗದವರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ತಾಂತ್ರಿಕ ಅಡಚಣೆಗೆ ನಿಖರ ಕಾರಣವೇನು ಎಂಬ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.







