ಬೆಂಗಳೂರು: ಬರುವ 2026-27ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿ (Class 1) ಪ್ರವೇಶಾತಿ ಪಡೆಯಲು ವಯೋಮಿತಿ ಸಡಿಲಿಕೆ ಮಾಡುವ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಯೋಮಿತಿ ನಿಯಮದಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಆತಂಕವನ್ನು ಮರು ಪರಿಶೀಲಿಸಿ, ಒಂದು ವಾರದೊಳಗೆ ಎಲ್ಲಾ ಆಯಾಮಗಳಲ್ಲೂ ಸೂಕ್ತ ಶಿಫಾರಸ್ಸು ಹಾಗೂ ತೀರ್ಮಾನ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ನೇತೃತ್ವದ ನ್ಯಾಯಪೀಠವು ಆರು ಮಂದಿ ಅಪ್ರಾಪ್ತ ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.
5 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಎದುರಾದ ಆತಂಕ
ಶಾಲಾ ಶಿಕ್ಷಣ ಇಲಾಖೆಯು ಇದೇ ವರ್ಷದ ಮಾರ್ಚ್ 28 ರಂದು ಹೊರಡಿಸಿದ್ದ ವಯೋಮಿತಿ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪೋಷಕರ ಪರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ನ್ಯಾಯಪೀಠದ ಗಮನಕ್ಕೆ ತಂದ ಪ್ರಮುಖ ಅಂಶಗಳು ಹೀಗಿವೆ:
-
ಯುಕೆಜಿ ಮುಗಿಸಿದರೂ ಪ್ರವೇಶವಿಲ್ಲ: ಅರ್ಜಿದಾರ ವಿದ್ಯಾರ್ಥಿಗಳಿಗೆ ಸದ್ಯ 6 ವರ್ಷ ಪೂರ್ಣಗೊಂಡಿಲ್ಲ. ಆದರೆ ಅವರು ಈಗಾಗಲೇ 2025-26 ನೇ ಸಾಲಿನ ಪೂರ್ವ ಪ್ರಾಥಮಿಕ ಶಿಕ್ಷಣವನ್ನು (UKG) ಯಶಸ್ವಿಯಾಗಿ ಪೂರೈಸಿದ್ದಾರೆ.
-
5 ಲಕ್ಷ ಮಕ್ಕಳಿಗೂ ಒಂದೇ ಆತಂಕ: ಸರ್ಕಾರದ ಈ ಕಠಿಣ ವಯೋಮಿತಿ ಆದೇಶದಿಂದಾಗಿ ರಾಜ್ಯದ ಸುಮಾರು 5 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಪ್ರೀ-ಸ್ಕೂಲ್ ಶಿಕ್ಷಣ ಮುಗಿಸಿ, ಶೈಕ್ಷಣಿಕವಾಗಿ ಮತ್ತು ಮಾನಸಿಕವಾಗಿ ಒಂದನೇ ತರಗತಿಗೆ ಸಿದ್ಧರಾಗಿರುವ ಈ 5 ಲಕ್ಷ ವಿದ್ಯಾರ್ಥಿಗಳು ಮತ್ತೆ ಯುಕೆಜಿ ತರಗತಿಯಲ್ಲೇ ಕೂರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಅವರ ಒಂದು ಸಂಪೂರ್ಣ ಶೈಕ್ಷಣಿಕ ವರ್ಷ ವ್ಯರ್ಥವಾಗುವ ಆತಂಕ ಎದುರಾಗಿದೆ.
-
ಪೋಷಕರ ನಿರೀಕ್ಷೆ ಸುಳ್ಳಾಗಿದೆ: ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳು ಹಿಂದಿನಿಂದಲೂ ಅನುಸರಿಸುತ್ತಿದ್ದ ಪ್ರವೇಶ ಪದ್ಧತಿ ಮತ್ತು ಅರ್ಹತಾ ಮಾನದಂಡಗಳ ಆಧಾರದ ಮೇಲೆಯೇ ಎಲ್.ಕೆ.ಜಿ ಮತ್ತು ಯುಕೆಜಿಗೆ ಸೇರಿಸಿದ್ದರು. 2026–27ರಲ್ಲಿ ಮಕ್ಕಳು ಒಂದನೇ ತರಗತಿಗೆ ಹೋಗುತ್ತಾರೆಂಬ ಭರವಸೆಯಲ್ಲಿದ್ದ ಪೋಷಕರಿಗೆ ಈ ನಿಯಮ ಭಾರಿ ಆಘಾತ ನೀಡಿದೆ.
ಒಮ್ಮೆಯ ಸಡಿಲಿಕೆಗೆ ಪೋಷಕರ ಮನವಿ
ವಿಚಾರಣೆ ವೇಳೆ ಪ್ರತಿವಾದಿಗಳ (ಸರ್ಕಾರದ) ಪರ ವಕೀಲರು ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಿ, “ನ್ಯಾಯಸಮ್ಮತ ಸಮಯ ನೀಡಿದಲ್ಲಿ ಮನವಿಯನ್ನು ಪರಿಗಣಿಸಿ ಇಲಾಖೆಯು ಅಗತ್ಯ ಆದೇಶ ಹೊರಡಿಸಲಿದೆ” ಎಂದು ತಿಳಿಸಿದರು.
ಇದರ ಬೆನ್ನಲ್ಲೇ, ಹೈಕೋರ್ಟ್ ಆದೇಶದಂತೆ ಮಕ್ಕಳ ಶಾಲಾ ದಾಖಲಾತಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಪ್ರಾಪ್ತ ವಿದ್ಯಾರ್ಥಿಗಳ ಪಾಲಕರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಪೋಷಕರ ಪತ್ರದಲ್ಲೇನಿದೆ? “ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರವು 5 ವರ್ಷ 5 ತಿಂಗಳು ವಯೋಮಿತಿವರೆಗೆ ಸಡಿಲಿಕೆ ನೀಡಿದ್ದನ್ನು ಪರಿಗಣಿಸಿ, ಈ ಬಾರಿಯ 2026–27ನೇ ಶೈಕ್ಷಣಿಕ ವರ್ಷದ ಪ್ರಥಮ ತರಗತಿ ಪ್ರವೇಶಕ್ಕೂ ಇದೇ ರೀತಿಯ ಒಮ್ಮೆಯ ಸಡಿಲಿಕೆಯನ್ನು (One-time relaxation) ನೀಡಬೇಕು. ಇದರಿಂದ ಮಕ್ಕಳ ಶೈಕ್ಷಣಿಕ ನಿರಂತರತೆ ಕಾಯ್ದುಕೊಳ್ಳಬಹುದು. ಅನಗತ್ಯ ಭಾವನಾತ್ಮಕ ಮತ್ತು ಶೈಕ್ಷಣಿಕ ವ್ಯತ್ಯಯವನ್ನು ತಪ್ಪಿಸಿ ಪೋಷಕರು ಹಾಗೂ ಶಾಲೆಗಳಿಗೆ ನೆಮ್ಮದಿ ನೀಡಲು ಇದು ಸಹಕಾರಿಯಾಗಲಿದೆ.”
ಹೈಕೋರ್ಟ್ ನೀಡಿದ ಗಡುವು
ಹೈಕೋರ್ಟ್ ಈಗ ಸರ್ಕಾರಕ್ಕೆ ಕೇವಲ ಒಂದು ವಾರದ ಗಡುವು ನೀಡಿದ್ದು, ವಯೋಮಿತಿ ಸಡಿಲಿಕೆ ಮಾಡಿ 5 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೂ 1ನೇ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಇಲಾಖೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇಡೀ ರಾಜ್ಯದ ಲಕ್ಷಾಂತರ ಪೋಷಕರ ಕುತೂಹಲಕ್ಕೆ ಕಾರಣವಾಗಿದೆ.








