ತುಮಕೂರು: ಸಂಬಂಧಿಕರ ಹುಡುಗನನ್ನು ಪ್ರೀತಿಸುತ್ತಿದ್ದ ಅಪ್ರಾಪ್ತ ಮಗಳನ್ನು ತಂದೆಯೇ ಬಾವಿಗೆ ತಳ್ಳಿ ಕೊಲೆ ಮಾಡಿ, ಶವವನ್ನು ನಿರ್ಜನ ಪ್ರದೇಶದಲ್ಲಿ ಹೂತಿಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದ ಯುವತಿಯನ್ನು ಮೇಘನಾ (17) ಎಂದು ಗುರುತಿಸಲಾಗಿದ್ದು, ಆಕೆಯ ತಂದೆ ತಿಮ್ಮರಾಯಪ್ಪ ಕೊಲೆ ಆರೋಪಿಯಾಗಿದ್ದಾನೆ. ಮಗಳು ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.ಮೃತ ಮೇಘನಾ ತನ್ನ ತಾಯಿಯ ಕಡೆಯ ಸಂಬಂಧಿಕರ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ತಂದೆ ತಿಮ್ಮರಾಯಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದನು. ಆದರೂ ಮಗಳು ಆತನ ಮಾತನ್ನು ಕೇಳಿರಲಿಲ್ಲ. ಹುಡುಗನ ಮನೆಯವರು ಯುವತಿಗೆ 18 ವರ್ಷ ತುಂಬಿದ ತಕ್ಷಣ ಮದುವೆ ಮಾಡಿಕೊಳ್ಳಲು ಈಗಾಗಲೇ ಸೀರೆ ಮತ್ತು ತಾಳಿಯನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡ ತಂದೆ, ಏಪ್ರಿಲ್ 16 ರಂದು ಮಗಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ. ಯಾರಿಗೂ ಅನುಮಾನ ಬಾರದಿರಲಿ ಎಂದು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಮಣ್ಣು ಮಾಡಿದ್ದನು. ನಂತರ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸುಳ್ಳು ಕಥೆ ಕಟ್ಟಿದ್ದನು.
ಮಗಳು ಕಾಣೆಯಾದ ಮೂರು ತಿಂಗಳ ಹಿಂದೆ ಮೇಘನಾ ತಾಯಿ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೊಂಡು ಬಾಲಕಿಯ ತಂದೆಯನ್ನು ವಿಚಾರಣೆಗೆ ಕರೆದಾಗಲೆಲ್ಲಾ ಆತ ತಲೆಮರೆಸಿಕೊಳ್ಳುತ್ತಿದ್ದನು. ಸುಮಾರು ಒಂದು ತಿಂಗಳ ಕಾಲ ಪೊಲೀಸರ ಕೈಗೆ ಸಿಗದೆ ತಿರುಪತಿ, ಧರ್ಮಸ್ಥಳ ಸೇರಿದಂತೆ ಹಲವು ಕಡೆ ಓಡಾಡಿಕೊಂಡಿದ್ದನು.
ಇತ್ತೀಚೆಗೆ ಪತಿಯೂ ನಾಪತ್ತೆಯಾಗಿರುವ ಕುರಿತು ಮೃತರ ತಾಯಿ ಕಳ್ಳಂಬೆಳ್ಳ ಠಾಣೆಗೆ ಮತ್ತೊಂದು ದೂರು ನೀಡಿದ್ದರು. ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ತಂದೆಯನ್ನು ಪತ್ತೆಹಚ್ಚಿದಾಗ ಭೀಕರ ಸತ್ಯಾಂಶ ಬೆಳಕಿಗೆ ಬಂದಿದೆ. ಆರೋಪಿ ತಿಮ್ಮರಾಯಪ್ಪ ತಾನೇ ಮಗಳನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಸೋಮವಾರ ತಹಶೀಲ್ದಾರ್ ನೇತೃತ್ವದಲ್ಲಿ ಮೃತದೇಹವನ್ನು ಹೊರಕ್ಕೆ ತೆಗೆದು ಶವ ಪರೀಕ್ಷೆ ನಡೆಸಲಾಗುವುದು ಎಂದು ಡಿವೈಎಸ್ಪಿ ಶೇಖರ್ ಅವರು ಮಾಹಿತಿ ನೀಡಿದ್ದಾರೆ.








