ನವದೆಹಲಿ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್ ಪೊಲೀಸರ ಮುಂದೆ ಶರಣಾಗಿದ್ದಾರೆ. 17 ವರ್ಷದ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಭಗೀರಥ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿ ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಯಲು ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಈ ಶರಣಾಗತಿ ನಡೆದಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, “ಮಗನ ಮೇಲಿನ ಆರೋಪಗಳ ಹಿನ್ನೆಲೆಯಲ್ಲಿ ಹಾಗೂ ಕಾನೂನಿಗೆ ಗೌರವ ನೀಡಿ, ತನಿಖೆಗೆ ಸಹಕರಿಸಲು ವಕೀಲರ ಮೂಲಕ ಭಗೀರಥ್ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ” ಎಂದು ತಿಳಿಸಿದ್ದಾರೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು: ಬಂಡಿ ಸಂಜಯ್
ತಮ್ಮ ಮಗನ ಶರಣಾಗತಿಯ ಬಳಿಕ ಮಾತನಾಡಿದ ತೆಲಂಗಾಣದ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವರಾದ ಬಂಡಿ ಸಂಜಯ್, “ಕಾನೂನಿನ ಮುಂದೆ ನನ್ನ ಮಗನಾಗಲಿ ಅಥವಾ ಸಾಮಾನ್ಯ ನಾಗರಿಕನಾಗಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಲೇಬೇಕು” ಎಂದು ಹೇಳಿದ್ದಾರೆ. ಇದೇ ವೇಳೆ, ರಾಜಕೀಯ ದುರುದ್ದೇಶದಿಂದ ತಮ್ಮ ಕುಟುಂಬವನ್ನು ಗುರಿ ಮಾಡಲಾಗುತ್ತಿದೆ ಮತ್ತು ತೇಜೋವಧೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶರಣಾಗತಿ ವಿಳಂಬಕ್ಕೆ ಕಾರಣವೇನು?
“ತನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾನೆ. ದೂರು ದಾಖಲಾದ ತಕ್ಷಣವೇ ಆತನನ್ನು ಪೊಲೀಸರಿಗೆ ಒಪ್ಪಿಸಲು ನಾವು ನಿರ್ಧರಿಸಿದ್ದೆವು. ಆದರೆ, ವಕೀಲರನ್ನು ಸಂಪರ್ಕಿಸಿ ನಮ್ಮ ಬಳಿಯಿದ್ದ ಸಾಕ್ಷ್ಯಗಳನ್ನು ತೋರಿಸಿದಾಗ, ಈ ಪ್ರಕರಣ ಖುಲಾಸೆಯಾಗುತ್ತದೆ ಮತ್ತು ಖಂಡಿತವಾಗಿಯೂ ಜಾಮೀನು ಸಿಗುತ್ತದೆ ಎಂದು ವಕೀಲರು ಸಲಹೆ ನೀಡಿದ್ದರು. ಈ ಕಾನೂನು ಪ್ರಕ್ರಿಯೆಯ ಸಮಾಲೋಚನೆಯಿಂದಾಗಿ ವಿಳಂಬವಾಗಿದೆ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
“ಈಗಲೂ ಮಗನಿಗೆ ಜಾಮೀನು ಸಿಗುವ ಭರವಸೆ ಇದೆ. ಆದಾಗ್ಯೂ, ವಿಷಯವನ್ನು ಇನ್ನು ಮುಂದೆ ವಿಳಂಬ ಮಾಡಬಾರದು ಎಂದು ನಿರ್ಧರಿಸಿ, ನಾನೇ ಖುದ್ದಾಗಿ ಮಗನನ್ನು ಕರೆತಂದು ವಕೀಲರ ಸಮ್ಮುಖದಲ್ಲಿ ತನಿಖೆಗೆ ಒಪ್ಪಿಸಿದ್ದೇನೆ” ಎಂದು ಬಂಡಿ ಸಂಜಯ್ ಕುಮಾರ್ ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.








