ಪಾಟ್ನಾ: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಐತಿಹಾಸಿಕ ಜಯ ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದ ಬಿಹಾರ ಮೂಲದ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರಿಗೆ ತವರು ರಾಜ್ಯದಿಂದ ಭರ್ಜರಿ ಗೌರವ ಸಂದಿದೆ. ವಿಶ್ವಕಪ್ ಟೂರ್ನಿಯಲ್ಲಿನ ಅವರ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿರುವ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಶುಕ್ರವಾರ ಇಶಾನ್ ಕಿಶನ್ ಅವರಿಗೆ 1 ಕೋಟಿ ರೂಪಾಯಿ ನಗದು ಬಹುಮಾನದ ಚೆಕ್ ಹಸ್ತಾಂತರಿಸಿದ್ದಾರೆ.
ಪಾಟ್ನಾದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ 27 ವರ್ಷದ ಕ್ರಿಕೆಟಿಗನನ್ನು ಸನ್ಮಾನಿಸಲಾಯಿತು.
ಸಿಎಂ ಸಾಮ್ರಾಟ್ ಚೌಧರಿ ಅವರು ಇಶಾನ್ಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಇಶಾನ್ ಕಿಶನ್ ಅವರ ಕುಟುಂಬಸ್ಥರು ಹಾಗೂ ಬಿಹಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರತ್ಯಯ್ ಅಮೃತ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಹಾರದ ಹೆಮ್ಮೆಯ ಮಗ!
ಇಶಾನ್ ಕಿಶನ್ ಪ್ರಸ್ತುತ ದೇಶಿ ಕ್ರಿಕೆಟ್ನಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದರೂ, ಅವರ ಬೇರುಗಳು ಇರುವುದು ಬಿಹಾರದಲ್ಲಿ. ಬಿಹಾರದ ನವಾಡ ಜಿಲ್ಲೆಯಲ್ಲಿ ಜನಿಸಿದ ಇಶಾನ್, ತಮ್ಮ ಬಾಲ್ಯದ ದಿನಗಳನ್ನು ಪಾಟ್ನಾದಲ್ಲಿ ಕಳೆದಿದ್ದರು. ಬಿಹಾರದ ಮಣ್ಣಿನ ಮಗ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವುದನ್ನು ಗೌರವಿಸಲು ಈ ಬಹುಮಾನ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.








