ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ ‘ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು-2026’ ಕ್ಕೆ ದಿನಾಂಕ ನಿಗದಿಯಾಗಿದೆ. ಮೇ 23 ರಿಂದ ಮೇ 25 ರವರೆಗೆ ಒಟ್ಟು ಮೂರು ದಿನಗಳ ಕಾಲ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಈ ಕ್ರೀಡಾಹಬ್ಬ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಿಳಿಸಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸ್ಪರ್ಧೆಗಳ ಸುಗಮ ನಿರ್ವಹಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ಸ್ಪರ್ಧೆಯ ಪ್ರಮುಖ ನಿಯಮಗಳು ಮತ್ತು ನಿಬಂಧನೆಗಳು:
ಅರ್ಹತೆ: ಈ ಕ್ರೀಡಾಕೂಟದಲ್ಲಿ ಕೇವಲ ರಾಜ್ಯ ಸರ್ಕಾರದ ಖಾಯಂ ನೌಕರರು ಮಾತ್ರ ಭಾಗವಹಿಸಲು ಅವಕಾಶವಿದೆ.
ನಿರ್ಬಂಧ: ದಿನಗೂಲಿ, ತಾತ್ಕಾಲಿಕ, ಗುತ್ತಿಗೆ ಆಧಾರಿತ, ಮತ್ತು ನಿಗಮ ಮಂಡಳಿಗಳ ನೌಕರರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಅಲ್ಲದೆ, ಕ್ರೀಡಾ ಕೋಟಾದಡಿ ನೇಮಕಗೊಂಡ ಇಲಾಖೆಯ ತರಬೇತುದಾರರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಬಂಧ ಹೇರಲಾಗಿದೆ.
ಗುರುತಿನ ಚೀಟಿ ಕಡ್ಡಾಯ: ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನೀಡಲಾದ ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಸ್ಪರ್ಧೆಗಳ ಮಿತಿ: ಒಬ್ಬ ಅಭ್ಯರ್ಥಿಯು ಗರಿಷ್ಠ 3 ಕ್ರೀಡೆಗಳಲ್ಲಿ ಮಾತ್ರ ಭಾಗವಹಿಸಬಹುದು (ಉದಾಹರಣೆಗೆ: 2 ಟ್ರ್ಯಾಕ್ ಮತ್ತು 1 ಫೀಲ್ಡ್ ಈವೆಂಟ್ ಅಥವಾ 1 ಟ್ರ್ಯಾಕ್ ಮತ್ತು 2 ಫೀಲ್ಡ್ ಈವೆಂಟ್ಗಳು).
ವಯೋಮಿತಿ: 45 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆಗಳಿದ್ದು, ಅವರು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಭಾಗವಹಿಸಬೇಕಾಗುತ್ತದೆ.
ವಸತಿ ಮತ್ತು ಸಾರಿಗೆ: ಈ ಬಾರಿ ಕ್ರೀಡಾಪಟುಗಳು ತಮ್ಮ ವಸತಿ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ಸರ್ಕಾರಿ ಆದೇಶದಂತೆ ವಿಶೇಷ ಸಾಂದರ್ಭಿಕ ರಜೆ ಮತ್ತು ಪ್ರಯಾಣ ಭತ್ಯೆ ಸೌಲಭ್ಯ ಲಭ್ಯವಿರುತ್ತದೆ.
ಸಾಂಸ್ಕೃತಿಕ ಸ್ಪರ್ಧೆಗಳ ವಿಶೇಷ ಸೂಚನೆ:
ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಚಲನಚಿತ್ರ ಗೀತೆಗಳಿಗೆ (ಫಿಲ್ಮ್ ಟ್ಯೂನ್) ಅವಕಾಶವಿರುವುದಿಲ್ಲ. ಅಲ್ಲದೆ, ಸಂಗೀತ, ನೃತ್ಯ, ಚೆಸ್ ಮತ್ತು ನಾಟಕ ಸ್ಪರ್ಧೆಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಶಿಸ್ತು ಉಲ್ಲಂಘಿಸುವ ಅಥವಾ ಅಸಭ್ಯವಾಗಿ ವರ್ತಿಸುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.









