ನವದೆಹಲಿ: ದೇಶದ ಆರ್ಥಿಕತೆ ಮತ್ತು ಕೃಷಿ ಚಟುವಟಿಕೆಗಳ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಈ ಬಾರಿ ನಿಗದಿಗಿಂತ ಐದು ದಿನ ಮುಂಚಿತವಾಗಿ, ಅಂದರೆ ಮೇ 26ರಂದೇ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಕೇರಳದ ಕರಾವಳಿಯನ್ನು ಸ್ಪರ್ಶಿಸುತ್ತದೆ. ಆದರೆ ಈ ಬಾರಿ ಹವಾಮಾನ ಬದಲಾವಣೆಯಿಂದಾಗಿ ಮೇ ಕೊನೆಯ ವಾರದಲ್ಲೇ ಮಳೆ ಮಾರುತಗಳು ಅಪ್ಪಳಿಸಲಿವೆ.
ಈ ವರ್ಷ ‘ಎಲ್ ನಿನೋ’ ಪ್ರಭಾವ ಇರುವುದರಿಂದ ದೇಶದಲ್ಲಿ ಮಳೆಯ ಪ್ರಮಾಣ ಕುಸಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಬಾರಿ ದೇಶಾದ್ಯಂತ ಸರಾಸರಿ 80 ಸೆ.ಮೀ. ನಷ್ಟು ಮಳೆಯಾಗುವ ನಿರೀಕ್ಷೆಯಿದೆ.ಮುಂಗಾರು ಮಳೆಯು ದೇಶದ ಒಟ್ಟು ಮಳೆಯ ಪ್ರಮಾಣದಲ್ಲಿ ಶೇ. 70 ರಷ್ಟು ಪಾಲನ್ನು ಹೊಂದಿದ್ದು, ಮುಂದಿನ 4 ತಿಂಗಳುಗಳಲ್ಲಿ ಹಂತ-ಹಂತವಾಗಿ ದೇಶಾದ್ಯಂತ ವ್ಯಾಪಿಸಿ ಕೃಷಿ ಚಟುವಟಿಕೆಗಳಿಗೆ ವೇಗ ನೀಡಲಿದೆ.
ಮುಂದಿನ 24 ಗಂಟೆಗಳಲ್ಲಿ ಅಂಡಮಾನ್ ಸಮುದ್ರ ಹಾಗೂ ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ.
ಕೇರಳ ಪ್ರವೇಶದ ನಿಗದಿತ ಸಮಯದಲ್ಲಿ 4 ದಿನಗಳ ಅಂತರ (ಮುಂಚಿತವಾಗಿ ಅಥವಾ ವಿಳಂಬವಾಗಿ) ಇರಬಹುದಾದರೂ, ಸದ್ಯದ ಲೆಕ್ಕಾಚಾರದ ಪ್ರಕಾರ ಮೇ 26ಕ್ಕೇ ಮಳೆ ಆರಂಭವಾಗುವ ಲಕ್ಷಣಗಳಿವೆ ಎಂದು ಇಲಾಖೆ ತಿಳಿಸಿದೆ.








