ಬೆಂಗಳೂರು: ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್, ಜನಿವಾರ, ಶಿವಧಾರ ಸೇರಿದಂತೆ ಸಾಂಪ್ರದಾಯಿಕ ಸಂಕೇತಗಳಿಗೆ ಅನುಮತಿ ನೀಡಿರುವ ಸರ್ಕಾರದ ಆದೇಶಕ್ಕೆ ರಾಜ್ಯದ ಖಾಸಗಿ ಶಾಲಾ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸಮವಸ್ತ್ರದ ವಿಚಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಕಡ್ಡಾಯ ಆದೇಶ ಮಾಡಲು ಸರ್ಕಾರಕ್ಕೆ ಬರುವುದಿಲ್ಲ ಎಂದು ಅವು ಹೇಳಿವೆ.
ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಮಾತನಾಡಿ, “ಸರ್ಕಾರದ ವಸ್ತ್ರಸಂಹಿತೆ ಆದೇಶವನ್ನು ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತರಬಹುದು. ಆದರೆ, ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಇದನ್ನು ಕಡ್ಡಾಯವಾಗಿ ಹೇರಲು ಸಂವಿಧಾನಾತ್ಮಕವಾಗಿ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ‘ಟಿಎಂಎ ಪೈ’ ಪ್ರಕರಣದಲ್ಲಿ ನ್ಯಾಯಾಲಯವು ಸಮವಸ್ತ್ರದ ವಿಚಾರವನ್ನು ಆಯಾ ಆಡಳಿತ ಮಂಡಳಿಗಳ ಸ್ವಂತ ನಿರ್ಧಾರಕ್ಕೆ ಬಿಟ್ಟಿದೆ. ಸರ್ಕಾರವು ನಿರ್ದಿಷ್ಟ ವಸ್ತ್ರಸಂಹಿತೆಯನ್ನು ಖಾಸಗಿ ಸಂಸ್ಥೆಗಳ ಮೇಲೆ ಹೇರುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದು ಸಂಘಟನೆಯಾದ ‘ರುಪ್ಪಾ’ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದ ಈ ಆದೇಶದಿಂದಾಗಿ ಮುಸ್ಲಿಂ, ಹಿಂದೂ, ಕ್ರೈಸ್ತ ಸೇರಿದಂತೆ ಎಲ್ಲಾ ಧರ್ಮದ ವಿದ್ಯಾರ್ಥಿಗಳು ತಮ್ಮದೇ ಆದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಬರಲು ಆರಂಭಿಸಿದರೆ, ಶಾಲೆಯಲ್ಲಿ ಸಮಾನತೆ ಎಂಬುದು ಎಲ್ಲಿ ಉಳಿಯುತ್ತದೆ?” ಎಂದು ಪ್ರಶ್ನಿಸಿದೆ.








