ಬೆಂಗಳೂರು: ಪೋಷಕರಿಂದ ಆಸ್ತಿಯನ್ನು ಉಡುಗೊರೆಯಾಗಿ (Gift Deed) ಪಡೆದ ನಂತರ, ಅವರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅಂತಹ ದಾನಪತ್ರವನ್ನು ರದ್ದುಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮೈಸೂರಿನ ನಿವೃತ್ತ ಶಿಕ್ಷಕಿಯೊಬ್ಬರು ತಮ್ಮ ಪುತ್ರಿಗೆ ನೀಡಿದ್ದ ಆಸ್ತಿ ದಾನಪತ್ರವನ್ನು ರದ್ದುಗೊಳಿಸಿದ ಮೈಸೂರು ಉಪವಿಭಾಗಾಧಿಕಾರಿಗಳ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಪ್ರಕರಣದ ಹಿನ್ನೆಲೆ:
ನಿವೃತ್ತ ಶಾಲಾ ಶಿಕ್ಷಕಿ ಹೇಮಾ ಎಂಬುವವರು ಪತಿಯೊಂದಿಗೆ ಮನಸ್ತಾಪ ಉಂಟಾದಾಗ ಸುಮಾರು 3 ವರ್ಷಗಳ ಕಾಲ ಮಗಳ ಮನೆಯಲ್ಲಿ ವಾಸವಿದ್ದರು. ಈ ಸಂದರ್ಭದಲ್ಲಿ ಮೈಸೂರಿನಲ್ಲಿರುವ ತಮ್ಮ ಸ್ವಯಾರ್ಜಿತ ಆಸ್ತಿಯನ್ನು (ಮನೆ) ಮಗಳ ಹೆಸರಿಗೆ ದಾನವಾಗಿ ನೀಡಿದ್ದರು. ಮಗಳು ಮತ್ತು ಅಳಿಯ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆಯ ಮೇಲೆ ಮನೆಯ ತಳಮಹಡಿಯನ್ನು ಮಗಳಿಗೂ ಮತ್ತು ಮೊದಲ ಮಹಡಿಯನ್ನು ಮಗನಿಗೂ 2024ರಲ್ಲಿ ದಾನ ನೀಡಿದ್ದರು.
ಆದರೆ, ಆಸ್ತಿ ಕೈ ಸೇರಿದ ಮೇಲೆ ಮಕ್ಕಳು ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ, ಎರಡೂ ಮಹಡಿಗಳ ಬಾಡಿಗೆಯನ್ನು ತಾವೇ ವಸೂಲಿ ಮಾಡುತ್ತಿದ್ದರು. ಅಲ್ಲದೆ ತಾಯಿಯನ್ನು ಬಾಡಿಗೆ ಮನೆಯಲ್ಲಿರಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಹೇಮಾ ಅವರು ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮಂಡಳಿಯು ದಾನ ಪತ್ರವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಅಭಿಮತ:
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯನ್ನು ವಜಾಗೊಳಿಸಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ:
-
ಶಾಸನಬದ್ಧ ಕರ್ತವ್ಯ: ಪಾಲಕರಿಂದ ಆಸ್ತಿ ಪಡೆದ ಮೇಲೆ ಅವರನ್ನು ನೋಡಿಕೊಳ್ಳುವುದು ಕೇವಲ ನೈತಿಕ ಹೊಣೆಗಾರಿಕೆಯಲ್ಲ, ಅದು ಶಾಸನಬದ್ಧ ಕರ್ತವ್ಯವೂ ಹೌದು.
-
ನಂಬಿಕೆಯೇ ಆಧಾರ: ಕುಟುಂಬ ಸದಸ್ಯರ ನಡುವಿನ ಆಸ್ತಿ ವರ್ಗಾವಣೆಯು ಪರಸ್ಪರ ನಂಬಿಕೆ ಮತ್ತು ನೈತಿಕ ಜವಾಬ್ದಾರಿಯ ಮೇಲೆ ನಿಂತಿರುತ್ತದೆ. ದಾನ ಪತ್ರದಲ್ಲಿ ‘ತಾಯಿಯನ್ನು ನೋಡಿಕೊಳ್ಳಬೇಕು’ ಎಂಬ ಲಿಖಿತ ಶರತ್ತು ಇಲ್ಲದಿದ್ದರೂ, ಅದನ್ನು ಸಂದರ್ಭ ಮತ್ತು ನಡವಳಿಕೆಯ ಆಧಾರದ ಮೇಲೆ ಅರ್ಥೈಸಿಕೊಳ್ಳಬೇಕು.
-
ಕಾನೂನು ಉಲ್ಲಂಘನೆ: ಸ್ವಂತ ಮನೆಯಿರುವ ಪುತ್ರಿ, ತಾಯಿಯಿಂದ ಸಿಕ್ಕ ಆಸ್ತಿಯ ಬಾಡಿಗೆಯನ್ನು ತಾನೇ ಪಡೆಯುತ್ತಾ ತಾಯಿಯನ್ನು ಬಾಡಿಗೆ ಮನೆಯಲ್ಲಿಟ್ಟಿರುವುದು ಕಾನೂನುಬದ್ಧ ಕರ್ತವ್ಯದ ಉಲ್ಲಂಘನೆಯಾಗಿದೆ.
ಪಡಿತರ ಅಕ್ಕಿ ದುರ್ಬಳಕೆ: ಗಂಭೀರ ಅಪರಾಧ
ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ, ಸಾರ್ವಜನಿಕ ಪಡಿತರ ವ್ಯವಸ್ಥೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವುದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಆರ್ಥಿಕ ಅಪರಾಧ ಎಂದು ಹೈಕೋರ್ಟ್ ಹೇಳಿದೆ. ಅಕ್ರಮ ಅಕ್ಕಿ ಮಾರಾಟ ದಂಧೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸಹಕರಿಸುವಂತೆ ಅಕ್ಕಿ ಗಿರಣಿ ಮಾಲೀಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.








