ಜೈಪುರ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ನೀಟ್-ಯುಜಿ 2026 ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಶ್ನೆಪತ್ರಿಕೆಯು ಮಹಾರಾಷ್ಟ್ರದ ನಾಸಿಕ್‌ನಿಂದ ಹರಿಯಾಣದ ಮೂಲಕ ರಾಜಸ್ಥಾನಕ್ಕೆ ತಲುಪಿದ್ದ ಬಗ್ಗೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡದ (SOG) ಐಜಿ (ಇನ್ಸ್‌ಪೆಕ್ಟರ್ ಜನರಲ್) ಮಹತ್ವದ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಮುದ್ರಣಾಲಯದಿಂದಲೇ (Printing Press) ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಶಂಕೆಯಿದೆ. ಅಲ್ಲಿಂದ ಹರಿಯಾಣದ ಗುರುಗ್ರಾಮದ ವೈದ್ಯರೊಬ್ಬರಿಗೆ ಮೊದಲು ಪತ್ರಿಕೆ ತಲುಪಿದೆ ಎಂದು ಎಸ್‌ಒಜಿ ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣದ ಗುರುಗ್ರಾಮದಿಂದ ಈ ಪತ್ರಿಕೆಯು ವಿವಿಧ ಏಜೆಂಟ್‌ಗಳ ಮೂಲಕ ರಾಜಸ್ಥಾನದ ಜೈಪುರ ಮತ್ತು ಸಿಕಾರ್ ಪ್ರದೇಶಗಳಿಗೆ ರವಾನೆಯಾಗಿದೆ. ಸಿಕಾರ್‌ನ ಕೋಚಿಂಗ್ ಸೆಂಟರ್‌ಗಳ ಮೂಲಕ ಇದನ್ನು ಸುಮಾರು 28 ಲಕ್ಷ ರೂಪಾಯಿವರೆಗಿನ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಹಗರಣದ ಕಿಂಗ್‌ಪಿನ್‌ಗಳು ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿ ಪ್ರಶ್ನೆಪತ್ರಿಕೆಯನ್ನು ಹಂಚಿದ್ದಾರೆ. ಇದು ದೆಹಲಿ, ಬಿಹಾರ ಮತ್ತು ಕೇರಳದವರೆಗೂ ಹರಡಿರುವ ಸಾಧ್ಯತೆಯಿದೆ ಎಂದು ಐಜಿ ವಿವರಿಸಿದ್ದಾರೆ.








