ನವದೆಹಲಿ: ಕೇಂದ್ರ ತನಿಖಾ ದಳದ (CBI) ನೂತನ ಮುಖ್ಯಸ್ಥರ ಆಯ್ಕೆಗಾಗಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವಿರೋಧ ಪಕ್ಷದ ನಾಯಕ ಕೇವಲ ರಬ್ಬರ್ ಸ್ಟ್ಯಾಂಪ್ ಅಲ್ಲ” ಎಂದು ಹೇಳುವ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯನ್ನು ಅವರು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು.
ಸಭೆಯ ನಂತರ ಮಾತನಾಡಿದ ರಾಹುಲ್ ಗಾಂಧಿ, “ಸರ್ಕಾರವು ಶಾರ್ಟ್‌ಲಿಸ್ಟ್ ಮಾಡಿರುವ ಅಧಿಕಾರಿಗಳ ಹೆಸರುಗಳನ್ನು ಸಭೆಯ ಕೇವಲ ಕೆಲವೇ ನಿಮಿಷಗಳ ಮೊದಲು ನೀಡಲಾಗುತ್ತಿದೆ. ಅಭ್ಯರ್ಥಿಗಳ ಹಿನ್ನೆಲೆ ಮತ್ತು ಅರ್ಹತೆಯನ್ನು ಪರಿಶೀಲಿಸಲು ನಮಗೆ ಸಮಯವನ್ನೇ ನೀಡುತ್ತಿಲ್ಲ” ಎಂದು ದೂರಿದ್ದಾರೆ.
ಸಿಬಿಐ ಮುಖ್ಯಸ್ಥರಂತಹ ಮಹತ್ವದ ಹುದ್ದೆಗೆ ಆಯ್ಕೆ ಮಾಡುವಾಗ ವಿರೋಧ ಪಕ್ಷದ ಅಭಿಪ್ರಾಯಕ್ಕೂ ಬೆಲೆ ಇರಬೇಕು. ಆದರೆ ಸರ್ಕಾರ ಈಗಾಗಲೇ ತನಗೆ ಬೇಕಾದವರ ಹೆಸರನ್ನು ಅಂತಿಮಗೊಳಿಸಿ ಸಭೆಗೆ ಬರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.








