ನವದೆಹಲಿ: ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಾಗಿದೆ. ಡಿಆರ್ಡಿಒ (DRDO) ಅಭಿವೃದ್ಧಿಪಡಿಸಿರುವ, ಏಕಕಾಲದಲ್ಲಿ ಹಲವು ಗುರಿಗಳನ್ನು ಧ್ವಂಸಗೊಳಿಸಬಲ್ಲ MIRV (Multiple Independently Targetable Re-entry Vehicle) ತಂತ್ರಜ್ಞಾನದ ಸುಧಾರಿತ ‘ಅಗ್ನಿ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಈ ವಿಶೇಷ ಕಾರ್ಯಾಚರಣೆಗೆ ‘ಮಿಷನ್ ದಿವ್ಯಾಸ್ತ್ರ’ ಎಂದು ಹೆಸರಿಸಲಾಗಿದ್ದು, ಈ ಮೂಲಕ ಭಾರತವು ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನ ಹೊಂದಿರುವ ವಿಶ್ವದ ಆಯ್ದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ.
ಸಾಮಾನ್ಯ ಕ್ಷಿಪಣಿಗಳು ಒಂದು ಬಾರಿಗೆ ಕೇವಲ ಒಂದು ಗುರಿಯನ್ನು ಮಾತ್ರ ತಲುಪಬಲ್ಲವು. ಆದರೆ MIRV ತಂತ್ರಜ್ಞಾನ ಹೊಂದಿರುವ ಕ್ಷಿಪಣಿಯು ಒಂದೇ ಉಡಾವಣೆಯಲ್ಲಿ ವಿವಿಧ ದಿಕ್ಕುಗಳಲ್ಲಿರುವ ಹಲವಾರು ಗುರಿಗಳನ್ನು (Multiple Warheads) ಏಕಕಾಲದಲ್ಲಿ ನಿಖರವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಇದು ಶತ್ರು ರಾಷ್ಟ್ರಗಳ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು (Missile Defence Systems) ಸುಲಭವಾಗಿ ಭೇದಿಸಬಲ್ಲದು.
ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಈ ಉಡಾವಣೆ ನಡೆಸಲಾಯಿತು.ಈ ಕ್ಷಿಪಣಿಯು 5,000 ಕಿಲೋಮೀಟರ್ಗಿಂತಲೂ ಅಧಿಕ ದೂರದ ಗುರಿಯನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದ್ದು, ಇಡೀ ಏಷ್ಯಾ ಖಂಡ ಹಾಗೂ ಯುರೋಪ್ನ ಕೆಲವು ಭಾಗಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುತ್ತದೆ.
ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ಭಾರತೀಯ ವಿಜ್ಞಾನಿಗಳೇ ಅಭಿವೃದ್ಧಿಪಡಿಸಿದ್ದು, ‘ಆತ್ಮನಿರ್ಭರ ಭಾರತ’ಕ್ಕೆ ದೊಡ್ಡ ಬಲ ನೀಡಿದೆ.








