ಬೆಂಗಳೂರು: ನಗರದ ನಾಗರಬಾವಿಯ ಹೋಟೆಲ್ವೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಹೋಟೆಲ್ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಇಡೀ ಕಟ್ಟಡದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಹೋಟೆಲ್ನ ಒಳಗಿದ್ದ ಐವರು ಸಿಬ್ಬಂದಿಗಳು ಹೊರಬರಲಾರದೆ ಸಿಲುಕಿಕೊಂಡಿದ್ದರು. ಹೊಗೆಯ ತೀವ್ರತೆಗೆ ಉಸಿರಾಡಲು ಸಾಧ್ಯವಾಗದೆ ಐವರೂ ತೀವ್ರವಾಗಿ ಅಸ್ವಸ್ಥಗೊಂಡಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು ಹೋಟೆಲ್ನಲ್ಲಿ ಸಿಲುಕಿದ್ದ ಭೀಮ, ಶಿವಾನಂದ, ಸತೀಶ್ ಮತ್ತು ರಾಜಕುಮಾರ್ ಸೇರಿದಂತೆ ಐವರನ್ನು ರಕ್ಷಿಸಿ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿತ್ತು. ದುರಾದೃಷ್ಟವಶಾತ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 45 ವರ್ಷದ ರಾಜಕುಮಾರ್ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರಿಗೆ ಪ್ರಸ್ತುತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.








