ತುಮಕೂರು: ಜಿಲ್ಲೆಯಲ್ಲಿ ಹಕ್ಕಿಜ್ವರದ (Bird Flu) ಭೀತಿ ತೀವ್ರಗೊಂಡಿದ್ದು, ಕೇವಲ ಒಂದು ತಿಂಗಳ ಅಂತರದಲ್ಲಿ ಬರೋಬ್ಬರಿ 57 ನವಿಲುಗಳು ಸಾವನ್ನಪ್ಪಿವೆ. ಈ ಘಟನೆಯು ಸಾರ್ವಜನಿಕರಲ್ಲಿ ಹಾಗೂ ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಇತ್ತೀಚೆಗಷ್ಟೇ ಜಿಲ್ಲೆಯ ಕೋಳಿಹಳ್ಳಿಯಲ್ಲಿ 45 ನವಿಲುಗಳು ಮೃತಪಟ್ಟಿದ್ದವು. ಆ ಘಟನೆ ಮಾಸುವ ಮುನ್ನವೇ ಈಗ ದುರ್ಗದಹಳ್ಳಿ ಮತ್ತು ಹಿರೇಹಳ್ಳಿ ವ್ಯಾಪ್ತಿಯಲ್ಲಿ ಮತ್ತೆ 12 ನವಿಲುಗಳು ಸಾವನ್ನಪ್ಪಿವೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.
ದೃಢಪಟ್ಟ ಹಕ್ಕಿಜ್ವರ (H5N1):
ಮೃತ ನವಿಲುಗಳ ಅಂಗಾಂಶಗಳನ್ನು ಪರೀಕ್ಷೆಗಾಗಿ ಭೂಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ನವಿಲುಗಳಿಗೆ ಹೈಲಿ ಪಥೋಜೆನಿಕ್ ಏವಿಯನ್ ಇನ್ಫ್ಲುಯೆನ್ಸ (H5N1) ಅಥವಾ ಹಕ್ಕಿಜ್ವರ ತಗುಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ಕಾಡುಪಕ್ಷಿಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ.
ಮೃತಪಟ್ಟ ನವಿಲುಗಳ ಮಾಂಸವನ್ನು ಬೀದಿನಾಯಿಗಳು ಎಳೆದೊಯ್ಯುತ್ತಿರುವುದು ಕಂಡುಬಂದಿದೆ. ಇದು ಸೋಂಕು ಮತ್ತಷ್ಟು ಹರಡಲು ದಾರಿಯಾಗಬಹುದು ಎಂಬ ಭೀತಿ ಎದುರಾಗಿದೆ. ಹಕ್ಕಿಜ್ವರವು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.ತುಮಕೂರು ನಗರದ ಗಡಿ ಭಾಗಗಳಲ್ಲಿಯೂ ನವಿಲುಗಳ ಸಂಚಾರ ಹೆಚ್ಚಿರುವುದರಿಂದ ನಗರವಾಸಿಗಳಲ್ಲೂ ಆತಂಕ ಶುರುವಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.








