ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಇರಾನ್‌ನೊಂದಿಗಿನ ಉದ್ವಿಗ್ನತೆಯ ನಡುವೆ ಅಮೆರಿಕ ಹಮ್ಮಿಕೊಂಡಿದ್ದ ಮಹತ್ವಾಕಾಂಕ್ಷೆಯ ಮಿಲಿಟರಿ ಕಾರ್ಯಾಚರಣೆ ‘ಪ್ರಾಜೆಕ್ಟ್ ಫ್ರೀಡಂ’ (Project Freedom) ಗೆ ಅನಿರೀಕ್ಷಿತ ಹಿನ್ನಡೆಯಾಗಿದೆ. ಸೌದಿ ಅರೇಬಿಯಾ ತನ್ನ ವಾಯುನೆಲೆ ಮತ್ತು ವಾಯುಪ್ರದೇಶವನ್ನು ಬಳಸಲು ಅಮೆರಿಕಕ್ಕೆ ಅನುಮತಿ ನಿರಾಕರಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಬೆದರಿಕೆಯ ನಡುವೆ ವಾಣಿಜ್ಯ ಹಡಗುಗಳಿಗೆ ರಕ್ಷಣೆ ನೀಡಲು ಅಮೆರಿಕ ಈ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಸೌದಿ ಅರೇಬಿಯಾ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ವರದಿಗಳು ತಿಳಿಸಿವೆ.
ಸೌದಿಯ ‘ಪ್ರಿನ್ಸ್ ಸುಲ್ತಾನ್ ವಾಯುನೆಲೆ’ಯನ್ನು ಬಳಸದಂತೆ ಮತ್ತು ತನ್ನ ವಾಯುಪ್ರದೇಶದಲ್ಲಿ ಅಮೆರಿಕದ ಯುದ್ಧವಿಮಾನಗಳ ಹಾರಾಟಕ್ಕೆ ರಿಯಾದ್ ನಿರ್ಬಂಧ ಹೇರಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಡೊನಾಲ್ಡ್ ಟ್ರಂಪ್ ಅವರು ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ.
ಕೇವಲ 36 ಗಂಟೆಗಳ ಹಿಂದೆ ಅಬ್ಬರದಿಂದ ಆರಂಭವಾಗಿದ್ದ ಈ ಮಿಷನ್, ಮಿತ್ರರಾಷ್ಟ್ರಗಳ ಬೆಂಬಲ ಸಿಗದ ಕಾರಣ ಈಗ ಅರ್ಧಕ್ಕೆ ನಿಂತಿದೆ.








