ಬೆಂಗಳೂರು: ರಾಜ್ಯದ ಕ್ರೀಡಾ ಸಾಧಕರಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ನಾಗರಿಕ ಸೇವೆಗಳ (ಸಿವಿಲ್ ಸೇವೆ) ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 2 ರಷ್ಟು ಮೀಸಲಾತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕ್ರೀಡಾ ಸಾಧಕರಿಗೆ ಶೇ. 2 ರಷ್ಟು ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ‘ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು-2026’ ಕ್ಕೆ ಸಚಿವ ಸಂಪುಟವು ಅಧಿಕೃತವಾಗಿ ಅನುಮೋದನೆ ನೀಡಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರವು ಕ್ರೀಡಾಪಟುಗಳಿಗೆ ಶೇ. 2 ರಷ್ಟು ಮೀಸಲಾತಿ ಘೋಷಿಸಿ ಆದೇಶ ಹೊರಡಿಸಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಡಿಸೆಂಬರ್ 2024 ರಲ್ಲಿ ಈ ಆದೇಶಕ್ಕೆ ತಡೆ ನೀಡಲಾಗಿತ್ತು. 1970 ರ ಕರ್ನಾಟಕ ನಾಗರಿಕ ಸೇವಾ ನಿಯಮ 9 ಕ್ಕೆ ತಿದ್ದುಪಡಿ ತರುವ ಮೂಲಕ ಈ ಮೀಸಲಾತಿಯನ್ನು ಜಾರಿಗೆ ತರಲು ಸರ್ಕಾರ ಈಗ ಮರು ಪರಿಶೀಲಿಸಿ ಅಂತಿಮ ನಿರ್ಧಾರ ಮಾಡಿದೆ.
ಪ್ರಯೋಜನ: ಇನ್ನು ಮುಂದೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ನಡೆಯುವ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಈ ಮೀಸಲಾತಿ ಅನ್ವಯವಾಗಲಿದ್ದು, ರಾಜ್ಯದ ಯುವ ಪ್ರತಿಭೆಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಇದು ದೊಡ್ಡ ಅವಕಾಶ ಕಲ್ಪಿಸಲಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಡಿಸಿದ ಈ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಒಪ್ಪಿಗೆ ನೀಡಲಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇದು ಆಸರೆಯಾಗಲಿದೆ.








