ಕೋಲ್ಕತ್ತಾ:ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರ ಭುಗಿಲೆದ್ದಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಸುದೀರ್ಘ ಕಾಲದ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಬುಧವಾರ (ಮೇ 6, 2026) ರಾತ್ರಿ ಅತ್ಯಂತ ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದೆ ನಡೆದ ತಾಂತ್ರಿಕ ಸ್ಕೆಚ್ ಮತ್ತು ಕಾರ್ಯಾಚರಣೆಯ ರೀತಿ ಬೆಚ್ಚಿಬೀಳಿಸುವಂತಿದೆ.
ಪೊಲೀಸ್ ಮೂಲಗಳ ಪ್ರಕಾರ, ಹಂತಕರು ಕಳೆದ 2-3 ದಿನಗಳಿಂದ ಚಂದ್ರನಾಥ್ ರಥ್ ಅವರ ಓಡಾಟದ ಮೇಲೆ ನಿಗಾ ಇಟ್ಟಿದ್ದರು (Recce). ಅವರ ದೈನಂದಿನ ಸಮಯ ಮತ್ತು ಮಾರ್ಗವನ್ನು ಹಂತಕರು ಮೊದಲೇ ತಿಳಿದುಕೊಂಡಿದ್ದರು.
ಚಂದ್ರನಾಥ್ ಅವರು ಕೋಲ್ಕತ್ತಾದಿಂದ ಮಾಧ್ಯಮಗ್ರಾಮ್‌ನಲ್ಲಿರುವ ತಮ್ಮ ಫ್ಲಾಟ್‌ಗೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ, ಹಂತಕರು ಮತ್ತೊಂದು ಎಸ್‌ಯುವಿ ವಾಹನವನ್ನು ಬಳಸಿ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಕಾರು ಅನಿವಾರ್ಯವಾಗಿ ವೇಗ ತಗ್ಗಿಸಿದ ಕೂಡಲೇ ಈ ದಾಳಿ ನಡೆದಿದೆ.
ಕಾರು ನಿಲ್ಲುತ್ತಿದ್ದಂತೆ ನಾಲ್ಕು ಮೋಟಾರ್ ಸೈಕಲ್‌ಗಳಲ್ಲಿ ಬಂದ ಸುಮಾರು ಎಂಟು ಮಂದಿ ದುಷ್ಕರ್ಮಿಗಳು ಚಂದ್ರನಾಥ್ ಅವರ ಕಾರನ್ನು ಸುತ್ತುವರಿದಿದ್ದಾರೆ. ಮೊದಲು ಮುಂಭಾಗದ ಗಾಜಿಗೆ ಗುಂಡು ಹಾರಿಸಿದ ಅವರು, ನಂತರ ನೇರವಾಗಿ ಚಂದ್ರನಾಥ್ ಅವರಿಗೆ ಗುರಿಯಿಟ್ಟು ಮೂರಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಗುಂಡೇಟಿನಿಂದ ತೀವ್ರ ರಕ್ತಸ್ರಾವಕ್ಕೊಳಗಾದ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಚಾಲಕ ಬುದ್ಧದೇವ್ ಕೂಡ ಗಾಯಗೊಂಡಿದ್ದಾರೆ.








