ಸೋಷಿಯಲ್ ಮೀಡಿಯಾ ದೈತ್ಯ ಇನ್ಸ್ಟಾಗ್ರಾಮ್ನಲ್ಲಿ ಇಂದು (ಮೇ 7, 2026) ಭಾರಿ ಬದಲಾವಣೆ ಕಂಡುಬಂದಿದೆ. ಜಗತ್ತಿನಾದ್ಯಂತದ ಸೆಲೆಬ್ರಿಟಿಗಳು ಮತ್ತು ಪ್ರಭಾವಿ ವ್ಯಕ್ತಿಗಳ (Influencers) ಫಾಲೋವರ್ಸ್ ಸಂಖ್ಯೆ ಏಕಾಏಕಿ ಲಕ್ಷಾಂತರ ಪ್ರಮಾಣದಲ್ಲಿ ಕುಸಿದಿದೆ. ಮೆಟಾ ಸಂಸ್ಥೆಯು ತನ್ನ ಪ್ಲಾಟ್ಫಾರ್ಮ್ನಲ್ಲಿರುವ ನಕಲಿ ಖಾತೆಗಳು ಮತ್ತು ಬಾಟ್ಗಳನ್ನು (Bots) ಪತ್ತೆಹಚ್ಚಿ ಡಿಲೀಟ್ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ನೆಟ್ಟಿಗರು ಇದನ್ನು “2026ರ ಮಹಾ ಶುದ್ಧೀಕರಣ” (Great Purge of 2026) ಎಂದು ಕರೆಯುತ್ತಿದ್ದಾರೆ.
ವರದಿಗಳ ಪ್ರಕಾರ, ಅಮೆರಿಕದ ಕೈಲಿ ಜೆನ್ನರ್ ಸುಮಾರು 1.4 ಕೋಟಿಗೂ ಹೆಚ್ಚು ಫಾಲೋವರ್ಸ್ಗಳನ್ನು ಕಳೆದುಕೊಂಡಿದ್ದಾರೆ. ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ 80 ಲಕ್ಷ ಫಾಲೋವರ್ಸ್ಗಳು ಕಡಿಮೆಯಾಗಿದ್ದರೆ, ಭಾರತದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ ಫಾಲೋವರ್ಸ್ ಸಂಖ್ಯೆಯಲ್ಲೂ ಸುಮಾರು 20 ಲಕ್ಷದಷ್ಟು ಇಳಿಕೆಯಾಗಿದೆ.
ಅನೇಕರು ತಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಥರ್ಡ್ ಪಾರ್ಟಿ ಆಪ್ಗಳ ಮೂಲಕ ನಕಲಿ ಅಥವಾ ಬಾಟ್ ಖಾತೆಗಳನ್ನು ಬಳಸುತ್ತಾರೆ. ಇಂತಹ ಖಾತೆಗಳು ಪ್ಲಾಟ್ಫಾರ್ಮ್ನ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತವೆ ಎಂಬ ಕಾರಣಕ್ಕೆ ಮೆಟಾ ಈಗ ಕಠಿಣ ಕ್ರಮ ಕೈಗೊಂಡಿದೆ.
“ನಿರಂತರವಾಗಿ ಸಕ್ರಿಯವಾಗಿರದ ಅಥವಾ ಇನ್ಸ್ಟಾಗ್ರಾಮ್ ನಿಯಮಗಳನ್ನು ಉಲ್ಲಂಘಿಸಿರುವ ಖಾತೆಗಳನ್ನು ನಾವು ತೆಗೆದುಹಾಕುತ್ತಿದ್ದೇವೆ. ಇದರಿಂದ ನಿಜವಾದ ಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೇವಲ ನಕಲಿ ಖಾತೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.








