ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಮುಖ್ಯಸ್ಥ ವಿಜಯ್ ಅವರು ಇಂದು (ಮೇ 7, 2026) ರಾಜಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಯನ್ನು ಸಾಬೀತುಪಡಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದ ವಿಜಯ್, ವಿಧಾನಸಭೆಯಲ್ಲಿ ವಿಶ್ವಾಸಮತ (Floor Test) ಯಾಚಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.
ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ವಿಜಯ್, ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ತಮಗೆ 118ಕ್ಕಿಂತ ಹೆಚ್ಚು ಶಾಸಕರ ಬೆಂಬಲವಿದೆ ಎಂದು ರಾಜ್ಯಪಾಲರಿಗೆ ತಿಳಿಸಿದ್ದಾರೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಟಿವಿಕೆ ಸದ್ಯ 108 ಸ್ಥಾನಗಳನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ ತಲುಪಲು ಕಾಂಗ್ರೆಸ್‌ನ 5 ಶಾಸಕರು ಹಾಗೂ ಇತರ ಪಕ್ಷಗಳ ಬೆಂಬಲದ ಮೇಲೆ ಅವಲಂಬಿತವಾಗಿದೆ.
“ನಮ್ಮ ಬಳಿ ಸಾಕಷ್ಟು ಸಂಖ್ಯಾಬಲವಿದೆ. ಸದನದಲ್ಲಿ ಇದನ್ನು ಸಾಬೀತುಪಡಿಸಲು ನಾವು ಸಿದ್ಧರಿದ್ದೇವೆ” ಎಂದು ವಿಜಯ್ ರಾಜ್ಯಪಾಲರಿಗೆ ಭರವಸೆ ನೀಡಿದ್ದಾರೆ. ಒಂದು ವೇಳೆ ರಾಜ್ಯಪಾಲರು ಒಪ್ಪಿಗೆ ನೀಡಿದರೆ, ತಮಿಳುನಾಡಿನಲ್ಲಿ ದಶಕಗಳ ನಂತರ ದ್ರಾವಿಡೇತರ ಪಕ್ಷವೊಂದು ಅಧಿಕಾರ ಹಿಡಿದಂತಾಗುತ್ತದೆ.
ರಾಜ್ಯಪಾಲ ಅರ್ಲೇಕರ್ ಅವರು ಮೊದಲು ಶಾಸಕರ ಬೆಂಬಲದ ಅಧಿಕೃತ ಸಹಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಸಂಖ್ಯಾಬಲದ ಬಗ್ಗೆ ಸಂಪೂರ್ಣ ಖಾತ್ರಿಯಾದ ನಂತರವಷ್ಟೇ ಪ್ರಮಾಣವಚನಕ್ಕೆ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ.








