ಶಿವಮೊಗ್ಗ: “ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ, ಯಾವುದೇ ಕಾರಣಕ್ಕೂ ಬೇಸೂರು ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ನಾನು ಅವಕಾಶ ನೀಡುವುದಿಲ್ಲ” ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗಾಂಧಿ ಮೈದಾನದಲ್ಲಿ ನಡೆದ ‘ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿ ಬೃಹತ್ ಪ್ರತಿಭಟನಾ ಸಭೆ’ಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ ಬೇಡವಾದ ಯೋಜನೆ
“ಬೇಸೂರು ಅಣು ವಿದ್ಯುತ್ ಸ್ಥಾವರ ಕೇವಲ ಬೇಸೂರು ಭಾಗಕ್ಕೆ ಮಾತ್ರವಲ್ಲ, ನಮ್ಮ ರಾಜ್ಯಕ್ಕೇ ಬೇಡ. ನಾಡಿಗೆ ಬೆಳಕು ನೀಡಲು ಈಗಾಗಲೇ ಮಲೆನಾಡಿನ ಜನ ಮೂರು ಬಾರಿ ತಮ್ಮ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಪದೇ ಪದೇ ಅಲೆಮಾರಿಗಳಂತಾಗಿರುವ ಜನರ ಮೇಲೆ ಇಂತಹ ಅಪಾಯಕಾರಿ ಯೋಜನೆಗಳನ್ನು ಹೇರುವುದನ್ನು ನಾನು ಸಹಿಸುವುದಿಲ್ಲ,” ಎಂದು ಗುಡುಗಿದರು.

ಎಂತಹ ತ್ಯಾಗಕ್ಕೂ ಸಿದ್ಧ
ಅಣು ಸ್ಥಾವರದಂತಹ ಯೋಜನೆಗಳು ಪರಿಸರ ಮತ್ತು ಜನರ ಮೇಲೆ ಬೀರುವ ಮಾರಕ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಈ ಭಾಗದ ಜನರನ್ನು ಸಂರಕ್ಷಿಸಲು ನಾನು ಎಂತಹ ತ್ಯಾಗಕ್ಕೂ ಸಿದ್ಧನಿದ್ದೇನೆ. ಅಧಿಕಾರಕ್ಕಿಂತ ನನಗೆ ಜನರ ಹಿತವೇ ಮುಖ್ಯ,” ಎಂದರು.
ಸರ್ಕಾರಕ್ಕೆ ತಡೆಯೊಡ್ಡುವ ಭರವಸೆ
“ರಾಜ್ಯ ಸರ್ಕಾರದ ಹಂತದಲ್ಲಿ ಈ ಯೋಜನೆಗೆ ಯಾವುದೇ ಕಾರಣಕ್ಕೂ ಭೂಮಿ ಮಂಜೂರು ಆಗದಂತೆ ನಾನು ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರಿ ಈ ಪ್ರಕ್ರಿಯೆಯನ್ನು ಇಲ್ಲಿಯೇ ತಡೆಯುತ್ತೇನೆ,” ಎಂದು ಭರವಸೆ ನೀಡಿದರು.

ಸಂಸದರಿಗೆ ಸವಾಲ್
ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರ ಹೆಸರನ್ನು ಉಲ್ಲೇಖಿಸಿದ ಶಾಸಕರು, “ನಾನು ರಾಜ್ಯ ಮಟ್ಟದಲ್ಲಿ ಈ ಯೋಜನೆಯನ್ನು ತಡೆಯುತ್ತೇನೆ. ಕೇಂದ್ರ ಸರ್ಕಾರದ ಹಂತದಲ್ಲಿ ಈ ಯೋಜನೆಗೆ ಅನುಮತಿ ಸಿಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಸದರ ಮೇಲಿದೆ. ಅವರು ಕೇಂದ್ರದ ಮೇಲೆ ಒತ್ತಡ ಹಾಕಿ ಯೋಜನೆಯನ್ನು ರದ್ದುಪಡಿಸಬೇಕು,” ಎಂದು ಆಗ್ರಹಿಸಿದರು.
ಜನಾಂದೋಲನದ ಎಚ್ಚರಿಕೆ:
ಜನರಿಗೆ ಮಾರಕವಾಗುವ ಯಾವುದೇ ಯೋಜನೆಯನ್ನು ಮಲೆನಾಡಿನ ಮಣ್ಣಿನಲ್ಲಿ ಅನುಷ್ಠಾನಕ್ಕೆ ತರಲು ಬಿಡುವುದಿಲ್ಲ. ಈ ಹೋರಾಟ ಕೇವಲ ಇವತ್ತಿಗೆ ಮುಗಿಯುವುದಿಲ್ಲ, ಯೋಜನೆ ಕೈಬಿಡುವ ತನಕ ಜನರೊಂದಿಗೆ ನಾನಿರುತ್ತೇನೆ ಎಂದು ಬೇಳೂರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ಪಕ್ಷಭೇದ ಮರೆತ ನಾಯಕರು: ಸಾಗರದ ಬೇಸೂರಲ್ಲಿ ಅಣು ಸ್ಥಾವರ ವಿರೋಧಿಸಿ ಒಂದಾದ ಬೇಳೂರು – ಹಾಲಪ್ಪ!
ನಿಮ್ಮ ದೇಹ ನೀಡುವ ಈ ಎಚ್ಚರಿಕೆಗಳನ್ನು ಕಡೆಗಣಿಸಬೇಡಿ; ಇದು ‘ಕ್ಯಾನ್ಸರ್’ ಇರಬಹುದು!








