ಮೈಸೂರು: ಕರ್ತವ್ಯದ ವೇಳೆಯಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರೊಂದಿಗೆ ಜಗಳವಾಡಿದ ಮತ್ತು ಮಹಿಳಾ ಸಿಬ್ಬಂದಿಗೆ ಅಶ್ಲೀಲವಾಗಿ ವಿಡಿಯೋ ಕಾಲ್ ಮಾಡಿದ ಗಂಭೀರ ಆರೋಪದ ಮೇಲೆ ಮೈಸೂರು ತಾಲ್ಲೂಕಿನ ವೈದ್ಯಾಧಿಕಾರಿಯೊಬ್ಬರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಘಟನೆಯ ವಿವರ: ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ಅಮಾನತುಗೊಂಡವರು. ಇವರ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೀಡಿದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ವೈದ್ಯಾಧಿಕಾರಿ ಮೇಲಿರುವ ಗಂಭೀರ ಆರೋಪಗಳು:
-
ಅಶ್ಲೀಲ ವಿಡಿಯೋ ಕಾಲ್: ಡಾ. ಅನಿಲ್ ಕುಮಾರ್ ಅವರು ತಮ್ಮ ಅಧೀನದ ಮಹಿಳಾ ಸಿಬ್ಬಂದಿಗಳಿಗೆ ಮಧ್ಯರಾತ್ರಿಯಲ್ಲಿ WhatsApp ಮೂಲಕ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದರು ಎಂಬ ಆರೋಪವಿದೆ.
-
ಸಾರ್ವಜನಿಕರೊಂದಿಗೆ ಜಗಳ: ದಿನಾಂಕ 28.04.2026 ರಂದು ಆಸ್ಪತ್ರೆಗೆ ಪಾನಮತ್ತರಾಗಿ ಬಂದು ಸಾರ್ವಜನಿಕರೊಂದಿಗೆ ಜಗಳವಾಡುತ್ತಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
-
ಕುಟುಂಬದ ಮಾಹಿತಿ: ಸದರಿ ವೈದ್ಯರು ವಿಪರೀತವಾಗಿ ಮದ್ಯಪಾನ ಮಾಡುವ ಬಗ್ಗೆ ಅವರ ಪತ್ನಿಯವರಿಂದಲೂ ಮಾಹಿತಿಯು ಲಭ್ಯವಾಗಿತ್ತು.
ಅಧಿಕೃತ ಆದೇಶ: ಈ ವರ್ತನೆಯು ಸರ್ಕಾರಿ ನೌಕರರಿಗೆ ತಕ್ಕದಲ್ಲದ ರೀತಿಯದ್ದಾಗಿದ್ದು, ಇಲಾಖೆಯ ಗೌರವಕ್ಕೆ ಚ್ಯುತಿ ತಂದಿದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಗುರುದತ್ತ ಹೆಗಡೆ (IAS) ಅವರು ಮೇ 6, 2026 ರಂದು ಡಾ. ಅನಿಲ್ ಕುಮಾರ್ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸ್ಥಳಾಂತರ: ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯುವ ಸಲುವಾಗಿ ಇವರ ಲೀನ್ ಅನ್ನು ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ತೋರ್ಣಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್
BREAKING: 75000 ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ








