ನವದೆಹಲಿ: ಭಾರತದ ವಿಮಾನಯಾನ ಕ್ಷೇತ್ರವು 2026ರ ಮೊದಲ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್‌ವರೆಗೆ) ಗಮನಾರ್ಹ ಪ್ರಗತಿ ದಾಖಲಿಸಿದೆ. ಒಟ್ಟು 4.37 ಕೋಟಿ ಪ್ರಯಾಣಿಕರು ದೇಶೀಯ ವಿಮಾನಗಳ ಮೂಲಕ ಪ್ರಯಾಣಿಸಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 4.38 ರಷ್ಟು ಬೆಳವಣಿಗೆಯನ್ನು ತೋರಿಸಿದೆ. ಆದರೆ, ಇದೇ ಅವಧಿಯಲ್ಲಿ ವಿಮಾನಗಳ ವಿಳಂಬದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮೊದಲ ಮೂರು ತಿಂಗಳಲ್ಲಿ ವಿಮಾನಯಾನ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಒಂದೆಡೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೆ, ಮತ್ತೊಂದೆಡೆ ವಿಮಾನಗಳ ವಿಳಂಬ (Flight Delays) ಭಾರಿ ಸಮಸ್ಯೆಯಾಗಿ ಪರಿಣಮಿಸಿದೆ. ಮಾರ್ಚ್ ತಿಂಗಳೊಂದರಲ್ಲೇ ವಿಮಾನಗಳ ವಿಳಂಬದಿಂದಾಗಿ ಸುಮಾರು 1.21 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ಮಾರ್ಚ್‌ನಲ್ಲಿ ತಾಂತ್ರಿಕ ಕಾರಣ ಅಥವಾ ಹವಾಮಾನ ವೈಪರೀತ್ಯದಿಂದಾಗಿ ಸುಮಾರು 34,000 ಪ್ರಯಾಣಿಕರು ವಿಮಾನ ರದ್ದತಿಯನ್ನು ಎದುರಿಸಿದ್ದಾರೆ. ಅಷ್ಟೇ ಅಲ್ಲದೆ, 922 ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಲಾಗಿದೆ.








