ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಆದಾಯ ಸೋರಿಕೆಯನ್ನು ತಡೆಗಟ್ಟಲು ತನಿಖಾ ಕಾರ್ಯವನ್ನು ಚುರುಕುಗೊಳಿಸಿದ್ದು, ಕೇವಲ ಮಾರ್ಚ್ ತಿಂಗಳಲ್ಲೇ ಸಾವಿರಾರು ಟಿಕೆಟ್ ರಹಿತ ಪ್ರಯಾಣಿಕರಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಿದೆ.
42 ಸಾವಿರಕ್ಕೂ ಹೆಚ್ಚು ವಾಹನಗಳ ತಪಾಸಣೆ
ಮಾರ್ಚ್-2026ರ ಮಾಹೆಯಲ್ಲಿ ನಿಗಮದ ವಿಶೇಷ ತನಿಖಾ ತಂಡಗಳು ರಾಜ್ಯಾದ್ಯಂತ ಸಂಚರಿಸುವ 42,395 ವಾಹನಗಳನ್ನು ತಪಾಸಣೆಗೊಳಪಡಿಸಿವೆ. ಈ ವೇಳೆ ಒಟ್ಟು 4,260 ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ನಿಯಮ ಮೀರಿ ಸಂಚರಿಸುತ್ತಿದ್ದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
8 ಲಕ್ಷಕ್ಕೂ ಅಧಿಕ ದಂಡ ವಸೂಲಿ
ತಪಾಸಣೆಯ ವೇಳೆ ಸಿಕ್ಕಿಬಿದ್ದ 4,265 ಟಿಕೆಟ್ ರಹಿತ ಪ್ರಯಾಣಿಕರಿಂದ ನಿಗಮವು ಒಟ್ಟು 8,16,375/- ರೂ. ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದೆ. ಇದರೊಂದಿಗೆ, ನಿಗಮದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದ 1,21,633/- ರೂ. ಗಳನ್ನು ತನಿಖಾಧಿಕಾರಿಗಳು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ
ಕೇವಲ ಪ್ರಯಾಣಿಕರಷ್ಟೇ ಅಲ್ಲದೆ, ಕರ್ತವ್ಯ ಲೋಪ ಎಸಗಿದ ಮತ್ತು ಆದಾಯ ಸೋರಿಕೆಗೆ ಕಾರಣರಾದ ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧವೂ ನಿಗಮವು ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮಗಳನ್ನು ಜರುಗಿಸಿದೆ.
ಪ್ರಯಾಣಿಕರಿಗೆ ನಿಗಮದ ಮನವಿ
ಬಸ್ಸಿನಲ್ಲಿ ಪ್ರಯಾಣಿಸುವ ಸಾರ್ವಜನಿಕರು ಕಡ್ಡಾಯವಾಗಿ ಸರಿಯಾದ ಟಿಕೆಟ್ ಅಥವಾ ಪಾಸ್‌ಗಳನ್ನು ಪಡೆದೇ ಪ್ರಯಾಣಿಸಬೇಕು. ಟಿಕೆಟ್ ರಹಿತ ಪ್ರಯಾಣ ಅಪರಾಧವಾಗಿದ್ದು, ಮುಜುಗರ ಮತ್ತು ದಂಡವನ್ನು ತಪ್ಪಿಸಲು ಸಹಕರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಈ ಮೂಲಕ ಪ್ರಕಟಣೆಯಲ್ಲಿ ವಿನಂತಿಸಿದೆ.
BIG NEWS: ‘ಸರ್ಕಾರಿ ಅಧಿಕಾರಿ’ಯನ್ನು ಕೆಸರಲ್ಲಿ ನಡೆಸಿದ ‘ಸಚಿವ’ನಿಗೆ ಒಂದು ತಿಂಗಳ ಜೈಲು ಶಿಕ್ಷೆವಿಧಿಸಿದ ಕೋರ್ಟ್
ಶಿವಮೊಗ್ಗದಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಹಾನಿಗೊಂಡ ಪ್ರದೇಶಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಶೀಲನೆ








